ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿರೊಂದಿಗೆ ಅಶ್ಲೀಲವಾಗಿ ವರ್ತಿಸಿರುವ  ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೋಳ್ಳಲು ಎಬಿವಿಪಿ ಒತ್ತಾಯ

Spread the love

ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿರೊಂದಿಗೆ ಅಶ್ಲೀಲವಾಗಿ ವರ್ತಿಸಿರುವ  ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೋಳ್ಳಲು ಎಬಿವಿಪಿ ಒತ್ತಾಯ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ದಿನಾಂಕ 29.08.2018 ರಂದು ವಿದ್ಯಾರ್ಥಿನಿಯೊಂದಿಗೆ ಕೆಲವು ದುಷ್ಕರ್ಮಿಗಳು ಅಶ್ಲೀಲವಾಗಿ ವರ್ತಿಸಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಈ ಘಟನೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿರುವ ಈ ಘಟನೆ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿರುವ ವಿದ್ಯಾರ್ಥಿನಿಯರ ಭದ್ರತೆ ಮತ್ತು ರಕ್ಷಣೆಯ ಬಗ್ಗೆ ಪ್ರಶ್ನೆಯನ್ನು ಮಾಡುವಂತಿದೆ. ಕ್ಯಾಂಪಸ್ನಲ್ಲಿ ಈ ಘಟನೆಗಳು ನಡೆಯುತ್ತಿದ್ದರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯಾವುದೇ ದಿಟ್ಟ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೇ ಮೊನ್ನೆ ನಡೆದ ಘಟನೆಗೆ ಸಂಬಂದಿಸಿದಂತೆ ಇಲ್ಲಿಯವರೆಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಪೋಲಿಸ್ ಇಲಾಖೆಯು ಕೂಡ ಪ್ರಕರಣಕ್ಕೆ ಸಂಬಂದಿಸಿದಂತೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಹಾಗಾಗಿ ವಿಶ್ವವಿದ್ಯಾಲಯ ಮತ್ತು ಪೋಲಿಸ್ ಇಲಾಖೆ ಸಂಪೂರ್ಣವಾಗಿ ಈ ಒಂದು ಪ್ರಕರಣವನ್ನು ನಿರ್ಲಕ್ಷಿಸಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸುಧಿತ್ ಶೆಟ್ಟಿ ಆರೋಪಿಸಿದ್ದಾರೆ.

ಕಾಟಚಾರಕ್ಕೆ ಪ್ರಕರಣವನ್ನು ಪೋಲಿಸ್ ಇಲಾಖೆಗೆ ಒಪ್ಪಿಸಿದ ವಿಶ್ವವಿದ್ಯಾಲಯ:
ಘಟನೆಗೆ ಸಂಬಂದಿಸಿದಂತೆ ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿಕೊಂಡು ದಿನಾಂಕ 30.08.2018 ರಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಮುಂದೆ ಹೋರಾಟವನ್ನು ನಡೆಸಲಾಗಿತ್ತು. ಹೋರಾಟದ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ವಿಶೇಷ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿಕೊಡುವ ಹಾಗೂ ದುಷ್ಕರ್ಮಿಗಳಿಗೆ ಶಿಕ್ಷೆಯನ್ನು ನೀಡುವ ಮಾತುಗಳನ್ನಾಡಿದ್ದರು. ಆದರೆ ವಿಶ್ವವಿದ್ಯಾಲಯದಿಂದ ಇಲ್ಲಿಯವರಗೂ ಪೋಲಿಸ್ ಇಲಾಖೆಗೆ ಯಾವುದೇ ರೀತಿಯ ಒಂದು ಪ್ರಭಲವಾದ ಲಿಖಿತವಾಗಿ ದೂರನ್ನು ದಾಖಲಿಸಿಲ್ಲ. ವಿದ್ಯಾರ್ಥಿಗಳ ರಕ್ಷಣೆ ಮತ್ತು ಭದ್ರತೆಗೆ ಒತ್ತು ನೀಡಬೇಕಿದ್ದ ವಿವಿ ಆಡಳಿತ ಮಂಡಳಿ ಕಾಟಾಚಾರಕ್ಕೆ ಈ ಒಂದು ಪ್ರಕರಣವನ್ನು ಪೋಲಿಸ್ ಇಲಾಖೆಗೆ ಒಪ್ಪಿಸಿದೆ. ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ಭೇಟಿ ಮಾಡಿ ದುಷ್ಕರ್ಮಿಗಳನ್ನು ಹಿಡಿಯುವ ಆಶ್ವಾಸನೆಯನ್ನು ಎಸಿಪಿಯವರು ವಿದ್ಯಾರ್ಥಿಗಳಿಗೆ ಭರವಸೆಯನ್ನು ಸಹ ನೀಡಿದ್ದರು.

ನಿಷ್ಪ್ರಯೋಜಕವಾದ ವಿವಿಯ ಶಿಸ್ತು ಪರಿಪಾಲನಾ ಸಮಿತಿ:
ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಜಾರಿಯಲ್ಲಿರುವ ವಿಶ್ವವಿದ್ಯಾಲಯದ ಶಿಸ್ತು ಪರಿಪಾಲನಾ ಸಮಿತಿಯ ಗಮನಕ್ಕೆ ಈ ವಿಷಯ ತಿಳಿದಿದೆಯಾ ಅಥವಾ ಬಂದಿದೆಯಾ ಅಥವಾ ಬಂದಿದ್ದರೇ ಯಾವ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೂ ಯಾಕೆ ನೀಡಿಲ್ಲ. ಈ ಪ್ರಕರಣದಲ್ಲಿರುವ ವಿದ್ಯಾರ್ಥಿನಿಯರೊಂದಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅಥವಾ ವಿಶ್ವವಿದ್ಯಾಲಯದ ಶಿಸ್ತು ಪರಿಪಾಲನಾ ಸಮಿತಿ ಪ್ರತ್ಯೇಕವಾಗಿ ಕರೆಸಿ ಘಟನೆಗೆ ಸಂಭಂದಿಸಿದಂತೆ ಮಾತುಕಥೆಯನ್ನಾದರೂ ನಡೆಸಿದೆಯಾ? ಈ ರೀತಿಯ ಘಟನೆಗಳು ವಿಶ್ವವಿದ್ಯಾಲಯದಲ್ಲಿ ನಡೆದಾಗ ಈ ಸಮಿತಿಯ ಪಾತ್ರವೆನೂ ಎಂಬ ಸಂದೇಹ ಮೂಡುತ್ತದೆ.

ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿದ ನಿಲಯ ಪಾಲಕರು:
ಪ್ರಕರಣದಲ್ಲಿರುವ ವಿದ್ಯಾರ್ಥಿನಿಯರಿಗೆ ಯಾವುದೇ ದೂರನ್ನು ಪೋಲಿಸರಿಗೆ ನೀಡುವಂತಿಲ್ಲ ಎಂಬ ಬೆದರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಈ ರೀತಿಯಾಗಿ ಬೆದರಿಕೆಯನ್ನು ಹಾಕುವುದರಿಂದ ವಿದ್ಯಾರ್ಥಿನಿಯನ್ನು ಮಾನಸಿಕವಾಗಿ ಹಾಗೂ ನೈತಿಕವಾಗಿ ತೊಂದರೆಯನ್ನು ನೀಡುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಪೋಲಿಸರಿಗೆ ದೂರನ್ನು ನೀಡಲು ಹಿಂಜರಿಯುತ್ತಿದ್ದಾರೆ.

ಶೌಚಾಲಯದಲ್ಲಿ ಮೊಬೈಲ್ನಿಂದ ಚಿತ್ರಿಕರಣ ಪ್ರಕರಣ:
ಕಳೆದ ವರ್ಷದಲ್ಲಿ ನಡೆದ ಶೌಚಾಲಯದಲ್ಲಿ ಮೊಬೈಲ್ನಿಂದ ಚಿತ್ರಿಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿ ಅದೇ ವರ್ಷ ಅಲ್ಲಿಯೇ ಪರೀಕ್ಷೆ ಬರೆದೂ ಉತ್ತಿರ್ಣನಾಗಿದ್ದಾನೆ. ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಯಾದ ವಿದ್ಯಾರ್ಥಿಯನ್ನು ಶಿಕ್ಷಿಸುವುದನ್ನು ಬಿಟ್ಟು ವಿಶ್ವವಿದ್ಯಾಲಯ ಅವನಿಗೆ ಪರೀಕ್ಷೆಯನ್ನು ಬರೆಯಲು ಅವಕಾಶ ಕೊಟ್ಟು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದೆ. ಈ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೇ ಇಂತಹ ಅಶ್ಲೀಲ ಪ್ರಕರಣಗಳಿಗೆ ಪರೋಕ್ಷವಾಗಿ ಬೆಂಬಲವನ್ನು ನೀಡುವಂತಿದೆ.

ಕಾರ್ಯ ನಿರ್ವಹಿಸದ ಸಿಸಿ ಕ್ಯಾಮರಗಳು:
ವಿಶ್ವವಿದ್ಯಾಲಯದ ಆವರಣದಲ್ಲಿ ಕೋಟ್ಯಾಂತರ ರೂಗಳನ್ನು ಖರ್ಚುಮಾಡಿ ವಿಶ್ವವಿದ್ಯಾಲಯದ ಎಲ್ಲಾ ಮೂಲೆ ಮೂಲೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧ ಪಟ್ಟಂತೆ ವಿದ್ಯಾರ್ಥಿಗಳು ಮತ್ತು ಪೋಲಿಸರು ಸಿಸಿ ಕ್ಯಾಮಾರದ ವಿಡಿಯೋ ತುಣುಕುಗಳನ್ನು ಕೇಳಿದಾಗ ವಿಶ್ವವಿದ್ಯಾಲಯ ನಿರ್ಲಕ್ಷಿಸುತ್ತಿದೆ. ಕಾರಣ 75 % ಸಿಸಿ ಕ್ಯಾಮಾರಗಳು ಕಾರ್ಯನಿರ್ವಹಿಸುತ್ತಿಲ್ಲ.

ಈ ಎಲ್ಲಾ ಘಟನೆಗಳನ್ನು ಗಮನಿಸಿದರೆ ವಿಶ್ವವಿದ್ಯಾಲಯದಲ್ಲಿ ಹಿಂದೆ ನಡೆದಿರುವ ಹಲವಾರು ಲೈಂಗಿಕ ಕಿರುಕುಳ ಪ್ರಕರಣಗಳನ್ನು ವಿಶ್ವವಿದ್ಯಾಲಯ ಮುಚ್ಚಿಹಾಕುವ ಪ್ರಯತ್ನವನ್ನು ನಡೆಸುತ್ತಿದೆ ಎಂಬ ಅನುಮಾನಗಳು ಮೂಡುತ್ತವೆ. ಆದ್ದರಿಂದ ಪೋಲಿಸ್ ಇಲಾಖೆ ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ವಿಶ್ವವಿದ್ಯಾಲಯದ ರಕ್ಷಣೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತನ್ನು ನೀಡಿ ವಿಶ್ವವಿದ್ಯಾಲಯದ ವಾತವರಣದಲ್ಲಿ ವಿದ್ಯಾರ್ಥಿನಿಯರು ಮುಕ್ತವಾಗಿ, ನಿಭರ್ಯವಾಗಿರಲು ಅನೂಕುಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.


Spread the love