ವೈಭವದ ಆಳುಪೋತ್ಸವಕ್ಕೆ ಸಿದ್ದಗೊಳ್ಳುತ್ತಿದೆ ಬಾರ್ಕೂರು

Spread the love

ವೈಭವದ ಆಳುಪೋತ್ಸವಕ್ಕೆ ಸಿದ್ದಗೊಳ್ಳುತ್ತಿದೆ ಬಾರ್ಕೂರು

ಉಡುಪಿ: ಜನವರಿ 25 ರಿಂದ 27 ರ ವರೆಗೆ ಬಾರ್ಕೂರಿನಲ್ಲಿ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ನಡೆಯುವ ಆಳುಪೋತ್ಸವಕ್ಕೆ ಬಾರ್ಕೂರಿನ ನಂದರಾಯನ ಕೋಟೆ ಅತ್ಯಂತ ಆಕರ್ಷಕವಾಗಿ ಸಿದ್ದಗೊಳ್ಳುತಿದೆ.

ಹಿಂದೆ ವಿಜಯನಗರ ಕಾಲದಲ್ಲಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದ ನಂದರಾಯ ನಿರ್ಮಿಸಿದ್ದ ಕೋಟೆ ಉತ್ಸವಕ್ಕೆ ಸಜ್ಜುಗೊಂಡಿದೆ, ತೀರ ಇತ್ತೀಚಿನವರೆಗೆ ಗಿಡ ಗಂಟೆಗಳಿಂದ ಕೂಡಿದ್ದ ಕೋಟೆಯ 14.12 ಎಕ್ರೆ ಜಾಗವನ್ನು ಸುಮಾರು 20 ದಿನಗಳಿಂದ ಸ್ವಚ್ಛಗೊಳಿಸಲಾಗಿದೆ, ಇಷ್ಟು ದಿನ ತೆರೆ ಮರೆಯಲ್ಲಿದ್ದ ಈ ಕೋಟೆ ಸಾರ್ವಜನಿಕರಿಗಾಗಿ ತೆರೆದುಕೊಳ್ಳುತ್ತಿದೆ. ಕೋಟೆಯ ಪ್ರದೇಶದಲ್ಲಿದ್ದ ಪುರಾತತ್ವ ಪಳೆಯುಳಿಕೆಗಳಿಗೆ ಯಾವುದೇ ಹಾನಿಯಾದಂತೆ ಅತ್ಯಂತ ಎಚ್ಚರಿಕೆಯಿಂದ ಸ್ವಚ್ಛಗೊಳಿಸಲಾಗಿದೆ, ಇಲ್ಲಿದ್ದ ಕಲ್ಯಾಣಿಯಲ್ಲಿ ತುಂಬಿದ್ದ ಹೂಳನ್ನು ಸ್ವಚ್ಛಗೊಳಿಸಿದ್ದು, ಕಲ್ಯಾಣಿಯಲ್ಲಿ ನೀರು ಬರಲಾರಂಭಿಸಿದೆ, ನಂದರಾಯನ ಕೋಟೆಯ ಅರಮನೆಯ ಭಾಗವನ್ನು ಸ್ವಚ್ಛಗೊಳಿಸಲಾಗಿದ್ದು, ಅರಮನೆಯಿದ್ದ ಸ್ಥಳ ಸ್ಪಷ್ಟವಾಗಿ ಕಾಣುವಂತಾಗಿದೆ.

ಆಳುಪೋತ್ಸವದ ಮುಖ್ಯ ವೇದಿಕೆಯಾದ ಭೂತಾಳ ಪಾಂಡ್ಯ ವೇದಿಕೆಯನ್ನು ಬೆಂಗಳೂರಿನ ಶಶಿಧರ ಅಡಪ ಸಿದ್ದಪಡಿಸುತ್ತಿದ್ದು, 36 ಅಡಿ ಎತ್ತರದ 80*60 ಅಳತೆಯ ವಿಶಾಲ ವೇದಿಕೆಯನ್ನು ಸುಮಾರು 40 ಮಂದಿ ಕಾರ್ಮಿಕರು 3 ದಿನದಿಂದ ಕಾರ್ಯ ನಿರ್ವಹಿಸುತ್ತಿದ್ದು, ನಾಳೆ ಸಂಜೆಯ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ವೇದಿಕೆ ಅಲಂಕಾರಕ್ಕಾಗಿ ಜಂಬೂ ಸವಾರಿ ಮಾದರಿಯ ಪ್ರತಿಮೆ ಹಾಗೂ ಇನ್ನಿತರ ಪ್ರತಿಮೆಗಳು ಸಿದ್ದಗೊಂಡಿವೆ, ನಂದರಾಯಕ ಕೋಟೆಯ ಮಹಾದ್ವಾರ ಸಹ ಸಿದ್ದಗೊಳುತ್ತಿದ್ದು, ಎಲ್ಲೆಡೆ ಆಕರ್ಷಕ ವಿದ್ಯುತ್ ಅಲಂಕಾರ ಸಹ ಮಾಡಲಾಗುತ್ತಿದೆ.

ಬಾರ್ಕೂರು ಸಂಸ್ಥಾನದಲ್ಲಿ ಆಳುಪರ ಕಾಲದ ನಂತರದ ಬೀಡಿನ ಮನೆ, ಗುತ್ತುಮನೆಯಲ್ಲಿ ಇದ್ದಂತಹ ಆಳುಪರ ನಾಡಿನ ತೌಳವ ಸಂಸ್ಕøತಿಯ ಕೃಷಿ ಮತ್ತು ಸಾಮಾಜಿಕ ಜೀವನದಲ್ಲಿ ಬಳಸುತ್ತಿದ್ದ ವಸ್ತುಗಳ ಪ್ರದರ್ಶನ ಸಹ ನಡೆಯಲಿದ್ದು, ಕುದುರೆ ಲಾಯ, ಮಾಸ್ತಿಕಲ್ಲು ಹಾಗೂ ವೀರಗಲ್ಲುಗಳ ದೀಪಾಲಂಕಾರ ನಡೆಯಲಿದೆ.

ಆಳುಪೋತ್ಸವದಲ್ಲಿ, ರಾಜ್ಯದ ವಿವಿಧ ಜಾನಪದ ತಂಡಗಳಿಂದ ಮೆರವಣಿಗೆ ಹಾಗೂ ಜಾನಪದ ಜಾತ್ರೆ, ತೋಟಗಾರಿಕೆ ಇಲಾಖೆಯಿಂದ ಫಲ ಪುಷ್ಪ ಪ್ರದರ್ಶನ, ವಿವಿಧ ಕರಕುಶಲ ವಸ್ತುಗಳ ಮಳಿಗೆ, ಸ್ಥಳೀಯ ಖಾದ್ಯಗಳ ಆಹಾರ ಮಳಿಗೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಹಾಗೂ ಬಾರ್ಕೂರು ಗತವೈಭವ ನೃತ್ಯ ರೂಪಕ, ಕೊರಗರ ನಾವಿನ್ಯ, ಆಳುಪೋತ್ಸವ ವಿಶೇಷ ಅಂಚೆ ಲಕೋಟೆ ಬಿಡುಗಡೆ, ಕತ್ತಲೆ ಬಸದಿಯಲ್ಲಿ ದೀಪೋತ್ಸವ, ಭಂಡಾರ್‍ಕರ್‍ರವರ ವಸತಿಯಲ್ಲಿ ತುಳು ಸಂಸ್ಕøತಿ ಅನಾವರಣ, ಬಾರ್ಕೂರಿನ ವಿವಿಧ ದೇವಾಲಯಗಳಲ್ಲಿ ಸ್ಥಳೀಯ ಸಮಿತಿಗಳಿಂದ ಅಲಂಕಾರ ಹಾಗೂ ನಗರಾಲಂಕಾರ ಸ್ಪರ್ದೆ, ಆಳುಪರ ಕುರಿತ ವಿಚಾರ ಸಂಕಿರಣ ನಡೆಯಲಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸರಕಾರದ ಸಾಧನೆ ಸಾರುವ ವಸ್ತುಪ್ರದರ್ಶನ ಕಾರ್ಯಕ್ರಮ ಸಹ ನಡೆಯಲಿದೆ.
ಕೋಟೆಯ ಪ್ರದೇಶದಲ್ಲಿ ಪ್ರಾಚ್ಯ ಪರಂಪರೆಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ ಎಚ್ಚರಿಕೆಯನ್ನು ಪ್ರದೇಶವನ್ನು ಸ್ವಚ್ಛಗೊಳಿಸಿದ್ದು, ಕೋಟೆಯ ಇತಿಹಾಸವನ್ನು ನಾಗರೀಕರು ಅರಿಯಲು ಸಾಧ್ಯವಾಗುವಂತೆ ಚೆಲ್ಲಾಪಿಲ್ಲಿಯಾಗಿದ್ದ ಪುರಾತನ ಅವಶೇಷಗಳನ್ನು ಕ್ರಮಬದ್ದವಾಗಿ ಜೋಡಿಸಲಾಗಿದ್ದು, ಐತಿಹಾಸಿಕ ಚಿತ್ರಣ ಕಣ್ತುಂಬಿಕೊಳ್ಳಬಹುದು ಎಂದು ಇತಿಹಾಸ ಪ್ರಾಧ್ಯಾಪಕ ಪ್ರೊ.ಮುರುಗೇಶಿ ಮಾಹಿತಿ ನೀಡಿದರು.
ಬಾರ್ಕೂರು, ಹನೇಹಳ್ಳಿ ಮತ್ತು ಹೇರಾಡಿ ಗ್ರಾಮ ಪಂಚಾಯತ್‍ಗಳ ಜನತೆ ತಮ್ಮಲ್ಲಿ ನಡೆಯುತ್ತಿರುವ ಉತ್ವವಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉತ್ವವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಳೂಪೋತ್ಸವದಲ್ಲಿ ಉಸ್ತುವಾರಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯರಾದ ಮಂಜಯ್ಯ ಹೆಗ್ಡೆ ತಿಳಿಸಿದರು.
ಆಳುಪೋತ್ಸವ ಹಾಗೂ ಜಾನಪದ ಜಾತ್ರೆಯನ್ನು ಆಯೋಜಿಸುವ ಮೂಲಕ ಸ್ಥಳಿಯರಿಗೆ ತಮ್ಮ ಇತಿಹಾಸವನ್ನು ನೆನೆಪು ಮಾಡಿಕೊಳ್ಳಲು ಮತ್ತು ತುಳುನಾಡಿನ ಶ್ರೀಮಂತ ಪರಂಪರೆಯನ್ನು ಹೊರ ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗಲಿದೆ.

ಬಾರಕೂರು ಇತಿಹಾಸ: ಐತಿಹಾಸಿಕವಾಗಿ ಈ ಸ್ಥಳದ ಅವಲೋಕನ ಮಾಡಿದರೆ 10 ರಿಂದ 14 ನೇ ಶತಮಾನದವರೆಗೆ ಆಳುಪರು ಬಾರ್ಕೂರನ್ನು ಆಳಿದ್ದರು. ಚಿಕ್ಕಾಯಿತಾಯಿ 3 ನೇ ವೈಶಾಲ ವೀರ ಬಲ್ಲಾಳನನ್ನು ವಿವಾಹವಾದ ಬಳಿಕ ಬಾರಕೂರು ಕೋಟೆ ಮತ್ತು ಬಾರ್ಕೂರಿನ ಸಂಪತ್ತು ಚಿಕ್ಕಾಯಿತಾಯಿ ಸುಪರ್ದಿಗೆ ಒಳಪಟ್ಟಿತು. ಬಾರ್ಕೂರಿನ ಹೇರಾಡಿ ಪಂಚಾಯತ್ ಸಮೀಪದಲ್ಲಿ ವಿಜಯ ನಗರ ಸಾಮ್ರಾಜ್ಯ ಕಾಲದ ನಂದರಾಯ ಕೋಟೆಯನ್ನು ಕಾಣಬಹುದು. ಬಾರ್ಕೂರು ನಗರವನ್ನು ವಿಜಯ ನಗರ ಸಾಮ್ರಾಜ್ಯದ ನಂದರಾಯ ಕಟ್ಟಿದ್ದ ಎಂದು ಹೇಳಲಾಗುತ್ತದೆ. 7 ಹಾಗೂ 8 ನೇ ಶತಮಾನದ ಬೆಳ್ಮಣ್ ತಾಮ್ರದ ಶಾಸನ ಮತ್ತು ಉದ್ಯಾವರದ ಶಾಸನಗಳಲ್ಲಿ ಇದರ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ. ಈ ಕೋಟೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಕೋಟೆಯಲ್ಲಿ ಇದ್ದಂತಹ ಜನರಿಗೆ ನೀರಿನ ಅವಶ್ಯಕತೆಯನ್ನು ಪೂರೈಸಲು ಕಲ್ಯಾಣಿಯನ್ನು ನಿರ್ಮಿಸಲಾಗಿತ್ತು ಎನ್ನುವ ಪ್ರತೀತಿ ಇದೆ.
ಕೋಟೆಯಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜ್ಯಪಾಲರ ಕುದುರೆ ಮತ್ತು ಆನೆಯನ್ನು ಕಟ್ಟಿ ಹಾಕುತ್ತಿದ್ದ ಲಾಯದ ಕುರುಹುಗಳನ್ನು ಕಾಣಬಹುದು. ವಿಜಯನಗರ ಸಾಮ್ರಾಜ್ಯಕ್ಕೆ ಅವಶ್ಯವಿದ್ದ ಆನೆ, ಕುದುರೆಗಳನ್ನು ಪರ್ಶಿಯಾದಿಂದ ಬಾರ್ಕೂರಿನ ಈ ಕೋಟೆಗೆ ತರಲಾಗುತ್ತಿತ್ತು. ಕೋಟೆಯಲ್ಲಿ ವಿಜಯನಗರಕ್ಕೆ ಬೇಕಾದ ಆನೆ ಕುದುರೆಗಳನ್ನು ಇರಿಸಿಕೊಂಡು ಉಳಿದವುಗಳನ್ನು ವಾಪಾಸ್ಸು ಕಳುಹಿಸಿಕೊಡಲಾಗುತ್ತಿತ್ತು ಎನ್ನಲಾಗುತ್ತದೆ. ಕೋಟೆಯಲ್ಲಿ ಒಂದು ಅರಮನೆ ಇದ್ದು, ಪ್ರಸ್ತುತ ಈ ಅರಮನೆಯ ಅಡಿಪಾಯ ಮಾತ್ರ ಕಾಣಬಹುದು.
ಇನ್ನು ಕೋಟೆಯ ಭದ್ರತೆಯ ದೃಷ್ಟಿಯಿಂದ ಕೋಟೆಯ ಸುತ್ತಲೂ ಕಂದಕವನ್ನು ನಿರ್ಮಿಸಿ ಅದಕ್ಕೆ ನೀರು ತುಂಬಿಸಿ ಮೊಸಳೆಗಳನ್ನು ಬಿಡಲಾಗುತ್ತಿತ್ತು. ಇದು ಕೋಟೆಯನ್ನು ಇತರರ ಆಕ್ರಮಣದಿಂದ ಕಾಪಾಡುವ ಸಲುವಾಗಿ ನಿರ್ಮಿಸಲಾಗಿತ್ತು. ಇದರ ಜೊತೆಗೆ ಕೋಟೆಯಲ್ಲಿ ಸಣ್ಣ ಸಣ್ಣ ಕಲ್ಲಿನ ಅವಶೇಷಗಳನ್ನೂ ಕಾಣಬಹುದು. ಕೋಟೆಯ ಹೊರ ಭಾಗದಲ್ಲಿ ಭೈರವನ ಮೂರ್ತಿಯನ್ನು ಕಾಣಬಹುದು.
ಪುರಾತತ್ವ ಇಲಾಖೆಯ ನಿರ್ದೇಶನದಂತೆ ಈ ಕೋಟೆ ಪ್ರದೇಶದ ಉತ್ಖನನಕ್ಕಾಗಿ ಶ್ರೀಕೃಷ್ಣ ಇಂಡಾಲಜಿ ಡೆಲ್ಲಿ ಮತ್ತು ಸ್ಪ್ರಿತ್ ಸೋಸೈಟಿ ಡೆಲ್ಲಿ ಒಳ ಒಪ್ಪಂದ ಮಾಡಿಕೊಂಡಿತ್ತು. ಪ್ರತಿದಿನ 5 ಸೆಂ.ಮೀ ಉತ್ಖನನ ನಡೆದಿದ್ದು , ಇದುವರೆಗೆ ಕೋಟೆಯ ಒಟ್ಟು ವಿಸ್ತೀರ್ಣದ ಶೇ.10 ರಷ್ಟು ಮಾತ್ರ ಉತ್ಖನನವಾಗಿದೆ.
ಸದ್ಯ ಈ ಆಳುಪೋತ್ಸವಕ್ಕೆ ಬಾರ್ಕೂರು, ಹಣೆಹಳ್ಳಿ, ಹೇರಾಡಿ ಪಂಚಾಯತ್ ಹಾಗೂ ಬಾರ್ಕೂರು ಊರವರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಸಹಕಾರ ಸಿಗುತ್ತಿದೆ. ಈ ಬಾರಿ ನಡೆಯುತ್ತಿರುವ ಆಳುಪೋತ್ಸವ ಭಾರಿ ನಿರೀಕ್ಷೆ ಹುಟ್ಟಿಸಿದ್ದು, ಈ ಕೋಟೆ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮದ ಒಂದು ಪ್ರವಾಸಿ ತಾಣವಾಗಿ ಬೆಳೆಯುವ ಸಾಧ್ಯತೆ ಇದೆ.


Spread the love