ವೋಟ್ ಚೋರಿ ಎಂದ ಮಹಾಘಟ ಬಂಧನಕ್ಕೆ ನಿಜವಾದ ಮರ್ಮಾಘಾತ –  ಶ್ರೀನಿಧಿ ಹೆಗ್ಡೆ

Spread the love

ವೋಟ್ ಚೋರಿ ಎಂದ ಮಹಾಘಟ ಬಂಧನಕ್ಕೆ ನಿಜವಾದ ಮರ್ಮಾಘಾತ –  ಶ್ರೀನಿಧಿ ಹೆಗ್ಡೆ  

ಉಡುಪಿ: ಬಿಹಾರ ವಿಧಾನಸಭಾ ಚುನಾವನೆಯಲ್ಲಿ ಬಿಜೆಪಿ, ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳ ಮೈತ್ರಿಕೂಟ ಎನ್‌ಡಿಎ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ಮಹಾಘಟಬಂಧನಕ್ಕೆ ಸ್ಪಷ್ಟವಾದ ಕೊಡಲಿಯೇಟು ನೀಡಿದೆ. ಕಾಂಗ್ರೆಸ್ ನೀಡಿದ ಖಾಲಿ ಭರವಸೆಗಳು ಮತ್ತು ಜನರನ್ನು ಮೋಸಗೊಳಿಸುವ ಪೊಳ್ಳು ಗ್ಯಾರಂಟಿಯ ರಾಜಕೀಯವನ್ನು ಬಿಹಾರದ ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ತಿಳಿಸಿದ್ದಾರೆ.

ಬುದ್ಧನ ತವರಾದ ಬಿಹಾರದಲ್ಲಿ ಈ ಬಾರಿ ದಾಖಲೆ ಮಟ್ಟದ ಮತದಾನವಾಗಿದ್ದು, ಇದು ಎನ್‌ಡಿಎ ಗೆಲುವಿನ ಭರವಸೆ ಮೂಡಿಸಿತ್ತು. ಕಾಂಗ್ರೆಸ್‌ನ ಗ್ಯಾರಂಟಿಯ ರಾಜಕೀಯವನ್ನು ಬಿಹಾರದ ಮತದಾರರು ತಿರಸ್ಕರಿಸಿದ್ದಾರೆ. ಜನ ನರೇಂದ್ರ ಮೋದಿಯವರ ಕೇಂದ್ರದ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ನಿತೀಶ್ ಕುಮಾರ್ ಅವರ ಪ್ರಗತಿಪರ ಆಡಳಿತ ಶೈಲಿಗೆ ಮತ್ತೊಮ್ಮೆ ಮನ್ನಣೆ ನೀಡಿದ್ದಾರೆ. ಇದರೊಂದಿಗೆ ಬಿಹಾರ ಮತ್ತೊಮ್ಮೆ ಬದಲಾಗುವ ಹೊಸ ಆಡಳಿತ ಕಾಲಕ್ಕೆ ಕಾಲಿಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಾಲು ಪ್ರಸಾದ್ ಯಾದವ್ ಆಡಳಿತಾವಧಿಯಲ್ಲಿನ ಕಾನೂನು ಸುವ್ಯವಸ್ಥೆಯ ಹೀನಾವಸ್ಥೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಘಟನೆಗಳನ್ನು ಜನ ಮರೆತಿಲ್ಲ. ಲಾಲು ಪ್ರಸಾದ್‌ ಆಡಳಿತಾವಧಿಯಲ್ಲಿ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುವವರಂತೆ ಬಳಸಿಕೊಂಡ ಸಂದರ್ಭಗಳನ್ನು ಬಿಹಾರದ ಜನ ಇನ್ನೂ ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಡಿಎಗೆ ಜನ ನೀಡಿರುವ ಬೆಂಬಲವು ರಾಷ್ಟ್ರದ ಜನತೆಗೆ ಬಿಜೆಪಿಯ ಮೇಲಿನ ವಿಶ್ವಾಸದ ಪ್ರತೀಕವಾಗಿದೆ. ಹೀಗಿದ್ದರೂ ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟದ ಸೋಲು ಸ್ಪಷ್ಟವಾದ ಬಳಿಕ ಮತ್ತೆ ಮತಗಟ್ಟೆ ಹಾಗೂ ಚುನಾವಣಾ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎಬ್ಬಿಸುತ್ತಿರುವುದು ವಿಪರ್ಯಾಸಕರವಾಗಿದೆ ಎಂದೂ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವು ದೇಶದಲ್ಲಿ “ವೋಟ್ ಚೋರಿ” ಎಂಬ ಆರೋಪ ಹಾಗೂ ಹಿಂದೂ ವಿರೋಧಿ, ಅತಿಯಾದ ಮತಪರ ತುಷ್ಟೀಕರಣ ರಾಜಕೀಯಕ್ಕೆ ಸ್ಪಷ್ಟ ಉತ್ತರ ನೀಡಿದೆ. ಈ ಚುನಾವಣೆಯಲ್ಲಿ ಮಹಾಘಟಬಂಧನಕ್ಕೆ ಭಾರೀ ಆಘಾತ ಆಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 200 ಸ್ಥಾನಗಳತ್ತ ಮುನ್ನಡೆದಿದ್ದು ಬಿಜೆಪಿ ಮೇಲೆ ರಾಷ್ಟ್ರದ ಜನ ಇಟ್ಟಿರುವ ವಿಶ್ವಾಸಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments