ಶಾಂತಿಯುತವಾಗಿ ಗಣೇಶೋತ್ಸವ ಆಚರಣೆಗೆ ಬಿಗಿ ಬಂದೋಬಸ್ತು: ಎಸ್ಪಿ ಅಭಿನವ್ ಖರೆ

Spread the love

ಶಾಂತಿಯುತವಾಗಿ ಗಣೇಶೋತ್ಸವ ಆಚರಣೆಗೆ ಬಿಗಿ ಬಂದೋಬಸ್ತು: ಎಸ್ಪಿ ಅಭಿನವ್ ಖರೆ

ಶಿವಮೊಗ್ಗ: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ ಅವರು ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ವರ್ಷಕ್ಕಿಂತ ಹೆಚ್ಚಿನ ಪೊಲೀಸ್ ಸಿಬ್ಬಂದಿ ಈ ಬಾರಿ ಲಭ್ಯವಿದ್ದು, ಪ್ರತಿಯೊಂದು ಗಣೇಶ ಮೂರ್ತಿ ವಿಸರ್ಜನೆಗೆ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹೋಂಗಾರ್ಡ್ ಸಿಬ್ಬಂದಿ ನಿಯೋಜಿಸಲಾಗುವುದು. ಶಿವಮೊಗ್ಗ ನಗರ ಸೇರಿದಂತೆ ಹಲವು ತಾಲೂಕುಗಳಲ್ಲಿ ರಾತ್ರಿ ಗಸ್ತು ತೀವ್ರಗೊಳಿಸಲಾಗಿದೆ. ಶಿವಮೊಗ್ಗದಲ್ಲಿ 23ಚೀತಾ ಬೈಕ್ ಮೂಲಕ ನಿರಂತರ ಗಸ್ತು ಕೈಗೊಳ್ಳಲಾಗುತ್ತಿದೆ. ನೆರೆ ಜಿಲ್ಲೆಗಳಿಂದ 13ಕೆಎಸ್‍ಆರ್‍ಪಿ ತುಕಡಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಈಗಾಗಲೇ ಹೊರ ಜಿಲ್ಲೆಗಳ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.

ಸಿಸಿ ಕ್ಯಾಮೆರಾ ಅಳವಡಿಕೆ: ಸಮಾಜ ಘಾತುಕ ಶಕ್ತಿಗಳ ಮೇಲೆ ನಿಗಾ ಇರಿಸಲು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಶಿವಮೊಗ್ಗ 120, ಭದ್ರಾವತಿ 52, ಶಿಕಾರಿಪುರ 32, ತೀರ್ಥಹಳ್ಳಿ 12 ಹಾಗೂ ಸಾಗರ ಉಪ ವಿಭಾಗದಲ್ಲಿ 29 ಸೇರಿದಂತೆ ಒಟ್ಟು 245ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ರೌಡಿಶೀಟರ್‍ಗಳ ಮೇಲೆ ಹದ್ದಿನ ಕಣ್ಣು: ಜಿಲ್ಲೆಯಲ್ಲಿ ಹೊಸದಾಗಿ 1168 ರೌಡಿಶೀಟರ್‍ಗಳನ್ನು ಗುರುತಿಸಲಾಗಿದ್ದು, ಒಟ್ಟು 2710 ರೌಡಿಶೀಟರ್‍ಗಳು ಜಿಲ್ಲೆಯಲ್ಲಿದ್ದಾರೆ. ಇವರಲ್ಲಿ 500ಕ್ಕೂ ಅಧಿಕ ಕಮ್ಯೂನಲ್ ಗೂಂಡಾಗಳಿದ್ದಾರೆ. ಇವರೆಲ್ಲರಿಗೂ ನೊಟೀಸ್ ಜಾರಿಗೊಳಿಸಲಾಗುತ್ತಿದೆ. 7ಮಂದಿಯನ್ನು ಗಡಿಪಾರು ಮಾಡಲು ಹಾಗೂ 5ಮಂದಿ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ಶಿಫಾರಸು ಮಾಡಲಾಗಿದೆ. 200ರೌಡಿಶೀಟರ್‍ಗಳ ಪರೇಡ್ ಮಾಡಿಸಿ, ಹಬ್ಬದ ಸಂದರ್ಭದಲ್ಲಿ ಕಂಡು ಬಂದರೆ ಬಂಧಿಸುವ ಎಚ್ಚರಿಕೆ ನೀಡಲಾಗಿದೆ. ಅಗತ್ಯ ಬಿದ್ದರೆ ಮುಂಜಾಗರೂಕತಾ ಕ್ರಮವಾಗಿ ಅವರನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.

ಶಾಂತಿ ಸಭೆ ಆಯೋಜನೆ: ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೊಹಲ್ಲಾ ಸಭೆ ಮತ್ತು ಶಾಂತಿಸಭೆ ಆಯೋಜಿಸಲಾಗಿದೆ. 269ಮೊಹಲ್ಲಾ ಸಭೆ, 79 ಶಾಂತಿಸಭೆಗಳು, 235ಗಣಪತಿ ಆಯೋಜಕರ ಸಭೆಗಳು, 7ರೂಟ್ ಮಾರ್ಚ್ ನಡೆಸಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ 2367 ಗಣಪತಿ ಪ್ರತಿಷ್ಟಾಪನೆ ಮಾಡಲಾಗುತ್ತಿದ್ದು, ಇದರಲ್ಲಿ ಶಿವಮೊಗ್ಗ 813, ಭದ್ರಾವತಿ 531, ಸಾಗರ 259, ಶಿಕಾರಿಪುರ 382 ಹಾಗೂ ತೀರ್ಥಹಳ್ಳಿಯಲ್ಲಿ 382ಗಣಪತಿಗಳಿವೆ. ಗಣಪತಿ ವಿಸರ್ಜನೆ ಕಾರ್ಯವನ್ನು ರಾತ್ರಿ 10ರ ಒಳಗಾಗಿ ಮುಗಿಸಲು ಸೂಚಿಸಲಾಗಿದೆ. ಕಳೆದ ವರ್ಷ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿರುವ ಅವಘಡದ ಹಿನ್ನೆಲೆಯಲ್ಲಿ ಈ ಬಾರಿ ದೋಣಿ, ತೆಪ್ಪಗಳ ಮೂಲಕ ತೆರಳಿ ಗಣಪತಿ ವಿಸರ್ಜಿಸುವುದನ್ನು ನಿರ್ಬಂಧಿಸಲಾಗಿದೆ ಎಂದರು.

 


Spread the love