ಶಾಸಕ ಖಾದರ್ ಗೆ ಬೆದರಿಕೆ – ದಕ ಜಿಲ್ಲಾ ಕಾಂಗ್ರೆಸಿನಿಂದ ಪೊಲೀಸ್ ಆಯುಕ್ತರಿಗೆ ದೂರು

Spread the love

ಶಾಸಕ ಖಾದರ್ ಗೆ ಬೆದರಿಕೆ – ದಕ ಜಿಲ್ಲಾ ಕಾಂಗ್ರೆಸಿನಿಂದ ಪೊಲೀಸ್ ಆಯುಕ್ತರಿಗೆ ದೂರು

ಮಂಗಳೂರು: ದಕ ಜಿಲ್ಲಾ ಬಿಜೆಪಿ ಎನ್ ಆರ್ ಸಿ ಯ ಪರವಾಗಿ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು ಟಿ ಖಾದರ್ ಅವರಿಗೆ ಜೀವ ಬೆದರಿಕೆ ಹಾಕಿದ್ದರ ವಿಚಾರವಾಗಿ ದಕ ಜಿಲ್ಲಾ ಕಾಂಗ್ರೆಸ್ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಮಂಗಳೂರು ನಗರದ ಓಷಿಯನ್ ಪರ್ಲ್, ಕೂಳೂರು ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಎನ್.ಆರ್.ಸಿಯ ಪರವಾಗಿ ಬಿ.ಜೆ.ಪಿ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಮತ್ತು ಜಿಲ್ಲಾ ಸಮಿತಿ ಸಂಯುಕ್ತವಾಗಿ ಜನಜಾಗೃತಿ ರ್ಯಾಲಿಯನ್ನು ಸಂಘಟಿಸಿದ್ದು ಅದಕ್ಕೆ ರಾಜ್ಯ ಬಿಜೆಪಿ ಘಟಕದ ನಾಯಕರುಗಳು ಮತ್ತು ರಾಷ್ಟ್ರ ನಾಯಕರುಗಳು ಭಾಗಿಯಾಗಿರುತ್ತಾರೆ. ಈ ರ್ಯಾಲಿಯಲ್ಲಿ ಭಾರತ ದೇಶದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ್ದರು.

ಈ ರ್ಯಾಲಿಯಲ್ಲಿ ಭಾಗವಹಿಸಿದ ಕೆಲವು ಸಮಾಜದ್ರೋಹಿ ಕ್ರಿಮಿನಲ್ ವ್ಯಕ್ತಿಗಳು ಕಾನೂನು ಬಾಹಿರವಾಗಿ ಗುಂಪುಗೂಡಿ ಮಾಜಿ ಕರ್ನಾಟಕ ರಾಜ್ಯ ಸಚಿವರು ಹಾಗೂ ಹಾಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಯು.ಟಿ.ಖಾದರ್ ಬಗ್ಗೆ ಮಲಯಾಳಂ ಭಾಷೆಯಲ್ಲಿ ‘ನಾಯಿಂಡೆ ಮೋನೆ ಖಾದರ್ ನಂಙಡೆ ಸುದ್ದಿಕ್ ಬರಂಡ, ನಂಙಡೆ ಸುದ್ದಿಕ್ ಬನ್ನಂಗಿಳ್ ಕೈಯುಂ ವೆಟ್ಟುಂ, ಕಾಲುಂ ವೆಟ್ಟುಂ, ವೇಂಡಿವನ್ನಂಗಿತಲೆಯುಂ ವೆಟ್ಟುಂ’ (ನಾಯಿ ಮಗನೆ ಖಾದರ್ ನಮ್ಮ ಸುದ್ದಿಗೆ ಬರಬೇಡ, ನಮ್ಮ ಸುದ್ದಿಗೆ ಬಂದರೆ ಕೈಯನ್ನು ಕಡಿಯುತ್ತೇವೆ, ಕಾಲನ್ನೂ ಕಡಿಯುತ್ತೇವೆ ಅಗತ್ಯ ಬಿದ್ದಲ್ಲಿ ತಲೆಯನ್ನು ಕಡಿಯುತ್ತೇವೆ) ಎಂದು ಘೋಷಣೆ ಕೂಗುತ್ತಾ ಕೊಲೆ ಬೆದರಿಕೆಯನ್ನು ಬಹಿರಂಗವಾಗಿ ನೀಡಿರುತ್ತಾರೆ. ಮಾತ್ರವಲ್ಲದೇ ಎರಡು ಧರ್ಮಗಳ ಮಧ್ಯೆ ವೈರತ್ವವನ್ನು ಉಂಟು ಮಾಡುವಂತಹ ರೀತಿಯಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುತ್ತಾರೆ. ಹಾಗೂ ಈ ಕೊಲೆ ಬೆದರಿಕೆ ಮತ್ತು ಪ್ರಚೋದನಾಕಾರಿ ಘೋಷಣೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳ ಮುಖಾಂತರ ಹಬ್ಬಿಸಿರುತ್ತಾರೆ.

ಇದರಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಮುಸ್ಲಿಂ ಧರ್ಮದ ಜನರ ಮಧ್ಯೆ ಮತ್ತು ಹಿಂದು ಧರ್ಮದ ಜನರ ಮಧ್ಯೆ ಇರುವಂತಹ ಸಾಮರಸ್ಯವನ್ನು ಹಾಗೂ ಸಮಾಜದ ಶಾಂತಿಯನ್ನು ಕದಡುವಂತಹ ಕ್ರಿಮಿನಲ್ ಚಟುವಟಿಕೆಯಲ್ಲಿ ಈ ಕ್ರ್ರಿಮಿನಲ್ ವ್ಯಕ್ತಿಗಳು ಹಾಗೂ ಅವರ ಸಹಚರರು ಭಾಗಿಯಾಗಿರುತ್ತಾರೆ. ಈಗಾಗಲೇ ರಾಜ್ಯದಲ್ಲಿ ಕೋಮು ಸಾಮರಸ್ಯದ ಬಗ್ಗೆ ಪ್ರಕ್ಷುಬ್ಧ ವಾತಾವರಣವಿದ್ದು ಇದೇ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳನ್ನು ಕೊಡುವುದರ ಮೂಲಕ ಅಪರಾಧವನ್ನು ಎಸಗಿರುತ್ತಾರೆ. ಈ ಕೃತ್ಯ ಎಸಗಿದವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕೇರಳದವರೆಂದು ತಿಳಿದು ಬಂದಿರುತ್ತದೆ.

ಈ ಬಗ್ಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರುಗಳಾದ ಹರೀಶ್ ಕಾರ್ಪಾಡಿ ಸಂಪ್ಯ, ಪ್ರತಾಪ್ ಸಂಪ್ಯ ಬೈಲಾಡಿ, ಬಾಬಾ ಕಲ್ಲರ್ಪೆ ಸಂಪ್ಯ, ನಾರಾಯಣ ರಿಕ್ಷೆ ತಿಂಗಳಾಡಿ, ನವೀನ್ ಸಲೂನ್ ಪುತ್ತೂರು, ಹರೀಶ್ ಸಂಪ್ಯಾಡಿ ಕುಕ್ಕಾಡಿ, ನಿತಿನ್ ಸಂಪ್ಯ ಇವರುಗಳನ್ನು ವಿಚಾರಣೆ ಮಾಡಿದ್ದಲ್ಲಿ ಸಂಪೂರ್ಣ ಮಾಹಿತಿ ದೊರಕಬಹುದು. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಮಾತ್ರವಲ್ಲದೇ ಶಾಂತಿ ಸ್ಥಾಪನೆ ಉದ್ದೇಶದಿಂದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ ಮುಚ್ಚಳಿಕೆಯನ್ನು ಕೂಡಲೇ ತೆಗೆಯುವ ಅಗತ್ಯತೆ ಇದೆ. ಈ ವ್ಯಕ್ತಿಗಳು ಘೋಷಣೆ ಕೂಗುವ ವಿಡಿಯೋ ಸಿ.ಡಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ಆದುದರಿಂದ, ಸದ್ರಿ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.


Spread the love