ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಅಧಿಕೃತ ಸರಕಾರಿ ಕಚೇರಿ ಉದ್ಘಾಟನೆ 

Spread the love

ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಅಧಿಕೃತ ಸರಕಾರಿ ಕಚೇರಿ ಉದ್ಘಾಟನೆ 

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೂತನ ಕಚೇರಿ ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಬುಧವಾರ ಉದ್ಘಾಟನೆಗೊಂಡಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ವೇದವ್ಯಾಸ ಕಾಮತ್ ಅವರ ಹೆತ್ತವರಾದ ಉದ್ಯಮಿ ಡಿ ವಾಮನ ಕಾಮತ್ ಹಾಗೂ ತಾರಾ ವಿ ಕಾಮತ್ ಕಚೇರಿ ಉದ್ಘಾಟಿಸಿದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಈ ಹಿಂದೆ ಖಾಸಗಿ ಕಚೇರಿಯ ಮೂಲಕ ಜನರ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಈಗ ಹೊಸ ಕಚೇರಿಯ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವ ಜತೆಗೆ ಪರಿಹಾರ ನೀಡುವ ಕಾರ್ಯ ತ್ವರಿತಗತಿಯಲ್ಲಿ ನಡೆಸಲು ಸಾಧ್ಯವಾಗಲಿದೆ. ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುವ ಮೂಲಕ ಮಂಗಳೂರು ನಗರದ ಅಭಿವೃದ್ಧಿಗೆ ಮತ್ತಷ್ಟು ದುಡಿಯಲು ಅವಕಾಶ ಸಿಗುತ್ತದೆ. ಸಾರ್ವಜನಿಕರು ಕಚೇರಿಗೆ ಬಂದು ತಮ್ಮ ಸಮಸ್ಯೆ ಅಹವಾಲುಗಳನ್ನು ಸಲ್ಲಿಸಬಹುದು ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಈ ನೂತನ ಕಚೇರಿಯ ಮೂಲಕ ಶಾಸಕ ವೇದವ್ಯಾಸ ಕಾಮತ್ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಲು ಇನ್ನಷ್ಟು ಸಹಕಾರಿಯಾಗುವುದರೊಂದಿಗೆ ಸಾರ್ವಜನಿಕರು ಕೂಡ ಮುಕ್ತವಾಗಿ ಶಾಸಕರೊಂದಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಉತ್ತಮ ವ್ಯವಸ್ಥೆ ನಿರ್ಮಾಣವಾಗಿದೆ ಎಂದರು.

ಈ ಸಂದರ್ಭ ಶಾಸಕರುಗಳಾದ ಡಾ| ಭರತ್ ಶೆಟ್ಟಿ ವೈ, ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜಾ, ಮಾಜಿ ಶಾಸಕ ಎನ್ ಯೋಗೀಶ್ ಭಟ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಮಾಜಿ ವಿಧಾನಪರಿಷತ್ ಸದಸ್ಯರುಗಳಾದ ಕ್ಯಾ|ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ|ಸತೀಶ್ ರಾವ್, ಸುನೀಲ್ ಆಚಾರ್ಯ, ಪಿಎಸ್ ಪ್ರಕಾಶ್, ವಿಶ್ವ ಹಿಂದೂ ಪರಿಷತ್ ನ ಎಂ ಬಿ ಪುರಾಣಿಕ್, ಮನಪಾ ವಿರೋಧ ಪಕ್ಷದ ನಾಯಕ ಪ್ರೇಮಾನಂದ ಶೆಟ್ಟಿ, ಮೀನುಗಾರಿಕಾ ಮುಖಂಡ ನಿತಿನ್ ಕುಮಾರ್, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಕಿಶೋರ್ ರೈ, ಕ್ಯಾ|ಬ್ರಿಜೇಶ್ ಚೌಟ, ಜಿ ಆನಂದ ಬಂಟ್ವಾಳ್, ಹರಿಕೃಷ್ಣ ಬಂಟ್ವಾಳ್, ಪ್ರಭಾ ಮಾಲಿನಿ, ಭಾಸ್ಕರ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಸಂತೋಷ್ ಕುಮಾರ ರೈ ಬೋಳಿಯಾರ್, ಸಂಜಯಪ್ರಭು, ರಾಜಗೋಪಾಲ ರೈ, ವಸಂತ ಜೆ ಪೂಜಾರಿ, ದಿವಾಕರ ಪಾಂಡೇಶ್ವರ್ ಹಾಗೂ ಬಿಜೆಪಿಯ ಎಲ್ಲಾ ಮನಪಾ ಸದಸ್ಯರು, ಎಲ್ಲಾ ವಾರ್ಡ್ ಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಾಸಕರ ಸಹೋದರ ಉದ್ಯಮಿ ವಾಸುದೇವ ಕಾಮತ್, ವೈಷ್ಣವಿ ಕಾಮತ್, ಶಾಸಕರ ಪತ್ನಿ ವೃಂದಾ ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಮೇಯರ್ ಭಾಸ್ಕರ ಕೆ ಮತ್ತು ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್ ಶಾಸಕರ ಕಚೇರಿಗೆ ಭೇಟಿ ಕೊಟ್ಟು ಶುಭ ಹಾರೈಸಿದರು .


Spread the love