ಶಿರಾಡಿ ರಸ್ತೆ ತಾತ್ಕಾಲಿಕ ಬಂದ್

Spread the love

ಶಿರಾಡಿ ರಸ್ತೆ ತಾತ್ಕಾಲಿಕ ಬಂದ್
ಮಂಗಳೂರು : ರಾಷ್ಟ್ರೀಯ ಹೆದ್ದಾರಿ-48(75) ರ ಬೆಂಗಳೂರು-ಮಂಗಳೂರು ರಸ್ತೆಯ ಕಿ.ಮೀ 237.00 (ಮಾರನಹಳ್ಳಿ)ಯಿಂದ ಕಿ.ಮೀ.263.00(ಅಡ್ಡಹೊಳೆ) ವರೆಗಿನ ಶಿರಾಡಿಘಾಟ್ ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು, ಆಗಸ್ಟ್ 13 ರಂದು ಬಿರುಗಾಳಿ ಸಹಿತ ಸುರಿದ ಭಾರೀ ಪ್ರಮಾಣದ ಮಳೆಗೆ ರಸ್ತೆ ಬಾಗಿರುವ ಭಾರೀ ಗಾತ್ರದ ಮರಗಳೊಂದಿಗೆ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿರುತ್ತದೆ.

ಆಗಸ್ಟ್ 14 ರಂದು ಶಿರಾಡಿ ಘಾಟ್ ರಸ್ತೆಯ ಕಿ.ಮೀ. 235 ರಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಮೇಲೆ ಗುಡ್ಡ ಕುಸಿದು ಬಿದ್ದಿರುವುದರಿಂದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆಯಿಂದ ಪ್ರಪಾತಕ್ಕೆ ಬಿದ್ದು, ಟ್ಯಾಂಕರ್ ಚಾಲಕ ಹಾಗೂ ಕ್ಷೀನರ್ ಮೃತಪಟ್ಟಿರುತ್ತಾರೆ. ಶಿರಾಡಿ ಘಾಟ್‍ನಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿರುವುದರಿಂದ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ, ರಸ್ತೆ ಕಾಮಗಾರಿ ನಡೆದು ದುರಸ್ತಿ ಆಗುವವರೆಗೂ ಆಗಸ್ಟ್ 16 ರಂದು ಬೆಳಿಗ್ಗೆ 6 ಗಂಟೆಯಿಂದ ಆಗಸ್ಟ್ 25 ರಂದು ಬೆಳಿಗ್ಗೆ 6 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿ 48(75) ರ ಶಿರಾಡಿಘಾಟ್ ರಸ್ತೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ತರಹದ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಸಂಪೂರ್ಣ ವಾಹನಗಳ ಸಂಚಾರವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅಧಿಸೂಚನೆ ಹೊರಡಿಸಿರುತ್ತಾರೆ.

ಭಾರಿ ಮಳೆಗೆ ಭೂಕುಸಿತದಿಂದ ಶಿರಾಡಿ ಘಾಟ್ ಮತ್ತು ಮಡಿಕೇರಿ ಘಾಟ್ ರಸ್ತೆ ಸಂಚಾರ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಮಂಗಳೂರು-ಬೆಂಗಳೂರು ಮಧ್ಯೆ ವಯಾ ಎಸ್.ಕೆ. ಬಾರ್ಡರ್, ಕುದುರೆಮುಖ ಮಾರ್ಗದಲ್ಲಿ ಆ.17 ರಿಂದ ಹಗಲು ವೊಲ್ವೋ ಬಸ್ ಸಂಚಾರ ಆರಂಭವಾಗಲಿದೆ.
ಶಿರಾಡಿ ಮತ್ತು ಮಡಿಕೇರಿ ಘಾಟ್ ಸಂಚಾರಕ್ಕೆ ಮುಕ್ತಗೊಳ್ಳುವರೆಗೆ ಕುದುರೆಮುಖ ಮಾರ್ಗದಲ್ಲಿ ಪರ್ಯಾಯ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.


Spread the love