ಶಿರ್ವ: ಸ್ಕೂಟಿಗೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

Spread the love

ಶಿರ್ವ: ಸ್ಕೂಟಿಗೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

ಉಡುಪಿ : ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ಗುರುವಾರ ಯದ್ವಾತದ್ವಾ ಕಾರು ಚಲಾಯಿಸಿ ದಂಪತಿ ಸಂಚರಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಶಿರ್ವ ಮಟ್ಟಾರು ನಿವಾಸಿ ಪ್ರೇಮಾ ಆಚಾರ್ಯ(48) ಎಂಬುವರು ಮೃತಪಟ್ಟಿದ್ದಾರೆ. ಅವರ ಪತಿ ರಮೇಶ್ ಆಚಾರ್ಯ ಗಾಯಗೊಂಡಿದ್ದಾರೆ.

ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಮುಂಭಾಗ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಶಿರ್ವ ಕಡೆಯಿಂದ ಶಂಕರಪುರ ಕಡೆಗೆ ವೇಗವಾಗಿ ಬಂದ ಕಾರು ಡಿಕ್ಕಿಯಾದ ರಭಸಕ್ಕೆ ನೆಲಕ್ಕಪ್ಪಳಿಸಿ ಗಂಭೀರ ಗಾಯಗೊಂಡಿದ್ದ ದಂಪತಿಯನ್ನು ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಆಚಾರ್ಯ ಶುಕ್ರವಾರ ಮುಂಜಾನೆ ಮೃತರಾದರು.

ಅಪಘಾತವೆಸಗಿದ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಕೂಟಿಗೆ ಡಿಕ್ಕಿಯಾದ ಕಾರು ಚರಂಡಿಗೆ ಬಿದ್ದಿದೆ. ಇದರಿಂದ ಕಾರು ವಿದ್ಯುತ್ ಕಂಬಕ್ಕೆ ಗುದ್ದುವುದು ತಪ್ಪಿದೆ. ಶಿರ್ವ ಪೊಲೀಸರು ಪ್ರಕರಣ ದಾಖಲಿಸಿದ್ದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ರಮೇಶ್ ಆಚಾರ್ಯ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಗುರುವಾರ ದಂಪತಿ ಪುತ್ರನ ಸ್ಕೂಟಿಯಲ್ಲಿ ಕುಂಜಾರುಗಿರಿ ಪಾಜಕ ದೇವಸ್ಥಾನಕ್ಕೆ ತೆರಳಿ, ಬಂಟಕಲ್ಲಿನಲ್ಲಿರುವ ಪ್ರೇಮಾ ಅವರ ತಾಯಿ ಮನೆ ಹೋಗಿ ಸಾಯಂಕಾಲ ವಾಪಸಾಗುತ್ತಿದ್ದಾಗ ಶಿರ್ವ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಪ್ರೇಮಾ ಅವರು ಮಟ್ಟಾರಿನ ಮಾತೃಶಕ್ತಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು. ದಂಪತಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.


Spread the love