ಶಿವಮೊಗ್ಗ: ಕ್ಯಾಂಟರ್ – ಕಾರು ನಡುವೆ ಢಿಕ್ಕಿ; ಒಂದೇ ಕುಟುಂಬದ ಐವರು ಮೃತ್ಯು

Spread the love

ಶಿವಮೊಗ್ಗ: ಕ್ಯಾಂಟರ್ – ಕಾರು ನಡುವೆ ಢಿಕ್ಕಿ; ಒಂದೇ ಕುಟುಂಬದ ಐವರು ಮೃತ್ಯು

ಶಿವಮೊಗ್ಗ: ಶಿವಮೊಗ್ಗ ತಾಲೂಕು ಆಯನೂರು ಬಳಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಕ್ಯಾಂಟರ್ ಮತ್ತು ಸ್ವಿಪ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ವರ್ಷದ ಹೆಣ್ಣುಮಗುವಿನ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ.

ಶಿವಮೊಗ್ಗ ನಗರದ ನಿವಾಸಿಗಳಾದ ಮಂಗಳಮ್ಮ (55), ಇವರ ಪುತ್ರಿ ಉಷಾ (32), ಮಗ ಮಂಜುನಾಥ (28), ಬೀರೂರು ಮೆಸ್ಕಾಂ ಕಚೇರಿಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆಳಿಯ ನೀಲಕಂಠ (36), ಮೊಮ್ಮಗ ನಂದೀಶ್ (9) ಮೃತಪಟ್ಟವರೆಂದು ಗುರುತಿಸಲಾಗಿದೆ. ನವಿ (4) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ತಾಲೂಕು ಕುಂಸಿಯಲ್ಲಿ ಕೆಲಸ ಮಾಡುತ್ತಿರುವ ಮೆಸ್ಕಾಂ ಜೆಇ ಚಂದ್ರಪ್ಪ ಇಂದು ಸೇವಾ ನಿವೃತ್ತಿ ಹೊಂದಲಿದ್ದು ಅವರಿಗೆ ಸಹೋದ್ಯೋಗಿಗಳು ಸಂಜೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಂದ್ರಪ್ಪ ಅವರ ಪತ್ನಿ, ಮಗ, ಮಗಳು ಮತ್ತು ಅಳಿಯ ಹಾಗೂ ಇಬ್ಬರು ಮೊಮ್ಮಕ್ಕಳು ಶಿವಮೊಗ್ಗದಿಂದ ಕಾರಿನಲ್ಲಿ ತೆರಳುತ್ತಿದ್ದರು. ಆಯನೂರು ಮತ್ತು ಕುಂಸಿ ನಡುವೆ ಚಿಕ್ಕದಾವನಂದಿ ಗ್ರಾಮದ ಬಳಿ ಕ್ಯಾಂಟರ್ ಲಾರಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಪೂರ್ಣ ನಜ್ಜುಗುಜ್ಜಾಗಿ ಮೃತ ದೇಹಗಳು ಸಿಕ್ಕಿಹಾಕಿಕೊಂಡಿದ್ದವು.

ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love