ಶೋಭಾ ಕರಂದ್ಲಾಜೆಗೆ ಠಕ್ಕರ್; ಸ್ಥಳೀಯ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಗೆ ಆಗ್ರಹಿಸಿ ನಾಳೆ (ಶನಿವಾರ) ಬೈಕ್ ರ‍್ಯಾಲಿ

Spread the love

 ಶೋಭಾ ಕರಂದ್ಲಾಜೆಗೆ ಠಕ್ಕರ್; ಸ್ಥಳೀಯ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಗೆ ಆಗ್ರಹಿಸಿ ನಾಳೆ ಬೈಕ್ ರ‍್ಯಾಲಿ

ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್‌ಗೆ ಬಿಜೆಪಿ ಟಿಕೆಟ್‌ಗಾಗಿ ಆಗ್ರಹಿಸಿ ಮೀನುಗಾರ ಸಮುದಾಯದ ಮುಖಂಡರ ಗುಂಪು ಮಲ್ಪೆ ಏಳೂರು ಮೊಗವೀರ ಭವನದಿಂದ ಕಡಿಯಾಳಿ ಜಿಲ್ಲಾ ಬಿಜೆಪಿ ಕಚೇರಿಯವರೆಗೂ ಶನಿವಾರ (ಮಾರ್ಚ್ 2) ಬೈಕ್ ರ‍್ಯಾಲಿ ನಡೆಯಲಿದೆ.

ಮಧ್ಯಾಹ್ನ 3 ಗಂಟೆಗೆ ಮಲ್ಪೆ ಏಳೂರು ಮೊಗವೀರ ಭವನದಿಂದ ಬೈಕ್ ರ‍್ಯಾಲಿ ಆರಂಭವಾಗುವ ನಿರೀಕ್ಷೆ ಇದ್ದು. ಹಾಲಿ ಸಂಸದೆ ಶೋಭಾ ಕರಂದ್ಲಾಜೆ (ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ) ಕ್ರಿಯಾಶೀಲರಾಗಿಲ್ಲ ಎಂದು ಜನವರಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಅಖಿಲ ಭಾರತ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ ಸುವರ್ಣ ನೇತೃತ್ವದಲ್ಲಿ ಈ ರ‍್ಯಾಲಿ ಆಯೋಜಿಸಲಾಗಿದೆ.

ಕರಾವಳಿ ಬೈಪಾಸ್ ಮತ್ತು ಮಲ್ಪೆ ನಡುವಿನ ಮೂರೂವರೆ ಕಿಮೀ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸದ ಶೋಭಾ ಕರಂದ್ಲಾಜೆ ಅವರನ್ನು ಕಿಶೋರ್ ಸುವರ್ಣ ತರಾಟೆಗೆ ತೆಗೆದುಕೊಂಡಿದ್ದರು, ಇದರ ವಿಡಿಯೋ ಕಳೆದ ತಿಂಗಳು ವೈರಲ್ ಆಗಿತ್ತು. ಶನಿವಾರ ನಡೆಯುವ ಬೈಕ್ ರ‍್ಯಾಲಿ ಕಾರ್ಯಕ್ರಮದ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸಂಘಟಕರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಪೋಸ್ಟರ್‌ನಲ್ಲಿ ‘ನಿಸ್ವಾರ್ಥ’ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಮತ್ತು ಭಾಗವಹಿಸುವಂತೆ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ.  ರ‍್ಯಾಲಿಯಲ್ಲಿ ಸುಮಾರು 200 ರಿಂದ 250 ಬೈಕ್ ಸವಾರರು ಭಾಗವಹಿಸಬಹುದು ಎಂದು ಮೂಲಗಳು ತಿಳಿಸಿವೆ.


Spread the love