ಶ್ರೀಕೃಷ್ಣ ಮಠದಲ್ಲಿ ಆಕರ್ಷಕವಾಗಿ ಜರುಗಿದ ಮೂರು ತೇರು ಉತ್ಸವ

Spread the love

ಶ್ರೀಕೃಷ್ಣ ಮಠದಲ್ಲಿ ಆಕರ್ಷಕವಾಗಿ ಜರುಗಿದ ಮೂರು ತೇರು ಉತ್ಸವ

ಉಡುಪಿ: ಸಪ್ತೋತ್ಸವದ ಆರನೇ ದಿನವಾದ ಮಂಗಳವಾರ ರಾತ್ರಿ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಪರ್ಯಾಯ ಕೃಷ್ಣಾಪುರ ಮಠಾಧೀಶರ ನೇತೃತ್ವದಲ್ಲಿ ಆಕರ್ಷಕ ಮೂರು ತೇರು ಉತ್ಸವ ನಡೆಯಿತು. ಆಕರ್ಷಕ ಮೂರು ತೇರು ಉತ್ಸವ ನಡೆಯಿತು.

ದಕ್ಷಿಣಾಯಣದ ಆರು ತಿಂಗಳ ಅವಧಿಯ ಕೊನೆಯ ದಿನವಾದ ಮಕರ ಸಂಕ್ರಮಣದ ದಿನದಂದು ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಮಠದ ಸಂಪ್ರದಾಯದಂತೆ ಮೂರು ರಥವನ್ನು ಎಳೆಯುವ ಉತ್ಸವ ಅನಾದಿ ಕಾಲದಿಂದಲೂ ನಡೆದು ಕೊಂಡು ಬರುತ್ತಿದೆ.

ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನವೆಂದು ಹೇಳಲಾದ ಮಕರಸಂಕ್ರಮಣದಂದು ರಾತ್ರಿ ರಥಬೀದಿಯಲ್ಲಿ ಮೂರು ತೇರು ಉತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯುವುದು ಸಂಪ್ರದಾಯವಾಗಿದೆ. ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರನ್ನು ತಂದು ರಥಗಳಲ್ಲಿ ಕುಳ್ಳಿರಿಸಲಾಯಿತು. ಚಿಕ್ಕ ರಥದಲ್ಲಿ ಮುಖ್ಯಪ್ರಾಣ, ಮಧ್ಯ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ಹಾಗೂ ಬ್ರಹ್ಮರಥದಲ್ಲಿ ಕೃಷ್ಣನನ್ನು ಕುಳ್ಳಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು.

ಮೂರು ತೇರು ಉತ್ಸವದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಶಿರೂರು ಮಠದ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.

ರಂಗುರಂಗಿನ ವಿದ್ಯುದ್ದೀಪಗಳಿಂದ ಅಲಂಕೃತ ಮಧ್ವ ಸರೋವರದಲ್ಲಿ ಶ್ರೀಕೃಷ್ಣ -ಮುಖ್ಯ ಪ್ರಾಣರಿಗೆ ತೆಪ್ಪೋತ್ಸವವೂ ನಡೆಯಿತು.


Spread the love