ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೆ : ಬ್ರಹ್ಮ ರಥ ಎಳೆದ ಚಿಣ್ಣರು

ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೆ : ಬ್ರಹ್ಮ ರಥ ಎಳೆದ ಚಿಣ್ಣರು

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಸುವರ್ಣಗೋಪುರ ಸಮರ್ಪಣೆ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಕೃಷ್ಣಮಠದ ರಥಬೀದಿಯಲ್ಲಿ ಸೋಮವಾರ ಆಯೋಜಿಸಿದ ಶ್ರೀಕೃಷ್ಣ ಚಿಣ್ಣರ ಸಂತರ್ಪಣೆ ಫಲಾನುಭವಿ ಶಾಲಾ ಮಕ್ಕಳ ಸಮಾವೇಶ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿವಸ್ತ್ರ ಎನ್ನುವುದು ಮನುಷ್ಯ ಯಾವ ರೀತಿ ಇದ್ದಾನೆ ಎಂಬುವುದನ್ನು ತೋರಿಸುವ ಮಾಧ್ಯಮ. ವಸ್ತ್ರಕ್ಕೆ ಅಷ್ಟೊಂದು ಮಹತ್ವವನ್ನು ನಮ್ಮ ಹಿರಿಯರು ಕೊಟ್ಟಿದ್ದಾರೆ. ವಸ್ತ್ರಕ್ಕೆ ಎಷ್ಟು ಮಹತ್ವವಿದೆಯೋ ನಾವು ತಿನ್ನುವ ಆಹಾರಕ್ಕೂ ಅಷ್ಟೇ ಮಹತ್ವವಿದೆ. ಒಳ್ಳೆಯ ಸಾತ್ವಿಕ ಆಹಾರವನ್ನು ಸೇವಿಸಿದರೆ ಬುದ್ಧಿಮಟ್ಟವೂ ಚೆನ್ನಾಗಿ ಬೆಳೆಯುತ್ತದೆ ಎಂದರು.

ನಮ್ಮ ಬುದ್ಧಿಮಟ್ಟ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ. ನಾವು ತಿನ್ನುವ ಆಹಾರ ಸಾತ್ವಿಕತೆಯಿಂದ ಕೂಡಿರದಿದ್ದರೆ, ನಮ್ಮ ಬುದ್ಧಿಯೂ ಕೆಡುತ್ತದೆ ಎಂಬುವುದನ್ನು ಮಹಾಭಾರತ ತೋರಿಸಿಕೊಟ್ಟಿದೆ. ಹಾಗೆಯೇ ಸಾತ್ವಿಕ ಆಹಾರ ಸೇವಿಸಿದರೆ ನಮ್ಮ ಬುದ್ಧಿಯೂ ಸಾತ್ವಿಕತೆಯಿಂದ ಕೂಡಿರುತ್ತದೆ ಎಂಬುವುದನ್ನು ರಾಮಾಯಣ ತಿಳಿಸುತ್ತದೆ ಎಂದು ಹೇಳಿದರು.

ಮಕ್ಕಳಿಗೆ ಸಮವಸ್ತ್ರ ವಿತರಿಸಿ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಒಂದು ಊರಿನ ಶಾಲೆ ಹಾಗೂ ದೇಗುಲ ಇರಬೇಕು. ಮನುಷ್ಯನಿಗೆ ಹೇಗೆ ಎರಡು ಕಣ್ಣುಗಳು ಮುಖ್ಯವೋ ಅದೇ ರೀತಿ ಊರಿಗೆ ಇವರೆಡು ಮುಖ್ಯ ಎಂದರು.

ಮಕ್ಕಳಲ್ಲಿ ದೇವರು ನೆಲೆಸಿದ್ದಾರೆ. ಅವರಿಗೆ ನೀಡುವ ಪ್ರತಿಯೊಂದು ವಸ್ತು ದೇವರಿಗೆ ಸಲ್ಲುತ್ತದೆ. ಪ್ರೀತಿಯಿಂದ ನಡೆಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುವುದಕ್ಕೆ ಚಿಣ್ಣರ ಸಂತರ್ಪಣೆ ಯೋಜನೆಯೇ ಸ್ಪಷ್ಟ ಉದಾಹರಣೆ. ಈ ಯೋಜನೆಯಡಿ ಬರುವ ಶಾಲೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಪ್ರತಿದಿನ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮ ಮುಂದುವರಿದಿದೆ ಎಂದು ತಿಳಿಸಿದರು.

ಮಠದ ದಿವಾನ ವೇದವ್ಯಾಸ ತಂತ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.

ಬಳಿಕ ಸಂಜೆ ನಡೆದ ಬ್ರಹ್ಮರಥೋತ್ಸವದಲ್ಲಿ ಶ್ರೀಕೃಷ್ಣ ಚಿಣ್ಣರ ಸಂತರ್ಪಣ ಫಲಾನುಭವಿ ಮಕ್ಕಳೊಂದಿಗೆ ಅಷ್ಟ ಮಠಾಧೀಶರು ಸೇರಿ ಬ್ರಹ್ಮ ರಥವನ್ನು ಎಳೆದರು.