ಸಂತ ಲಾರೆನ್ಸರ ತ್ಯಾಗಮಯ ಜೀವನ ಅನುಕರಣೀಯ : ಉಡುಪಿ ಬಿಷಪ್ ಜೆರಾಲ್ಡ್ ಲೋಬೊ

Spread the love

ಸಂತ ಲಾರೆನ್ಸರ ತ್ಯಾಗಮಯ ಜೀವನ ಅನುಕರಣೀಯ : ಉಡುಪಿ ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: “ಭಗವಂತ ಮನುಷ್ಯನನ್ನು ಒಳ್ಳೆಯತನಕ್ಕಾಗಿ ಸೃಷ್ಠಿಸಿದ್ದಾನೆ. ಆದರೆ ಮನುಷ್ಯ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸಿ ಕೆಟ್ಟತನವನ್ನು ಆಲಂಗಿಸಿದ್ದಾನೆ. ಸಂತ ಲಾರೆನ್ಸ್‍ರಂತಹ ಶ್ರೇಷ್ಠ ವ್ಯಕ್ತಿಗಳು ಪರರಿಗಾಗಿ ತಮ್ಮ ಜೀವನವನ್ನೇ ತ್ಯಾಗಗೈದು ಒಳ್ಳೆಯತನದ ಮೇರು ಪರ್ವತಗಳಾಗಿ ಕಂಗೊಳಿಸುತ್ತಿದ್ದಾರೆ. ಅವರ ಜೀವನ ಅನುಕರಣೀಯ.” ಐದು ದಿನಗಳ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನ ಹಬ್ಬದ ಸಂಭ್ರಮದ ಬಲಿಪೂಜೆಯನ್ನು ಮೂವತ್ತಕ್ಕೂ ಹೆಚ್ಚು ಧರ್ಮಗುರುಗಳೊಂದಿಗೆ ಉಡುಪಿಯ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊರವರು ಪ್ರಬೋಧನೆ ನೀಡುತ್ತಿದ್ದರು. ಈ ಬಲಿಪೂಜೆಯಲ್ಲಿ 5,000 ಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದರು. ಬುಧವಾರದಂದು ಪುಣ್ಯಕ್ಷೇತ್ರದಲ್ಲಿ ಹನ್ನೊಂದು ಬಲಿಪೂಜೆಗಳು ನೆರವೇರಿ ಸಾವಿರಾರು ಭಕ್ತಾದಿಗಳು ಇವುಗಳಲ್ಲಿ ಪಾಲ್ಗೊಂಡರು.

ದಿನದ ಹಬ್ಬದ ವಿಶೇಷ ಬಲಿಪೂಜೆಗಳನ್ನು ಕೊಂಕಣಿ ಭಾಷೆಯಲ್ಲಿ ಉಡುಪಿಯ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊರವರು ಹಾಗೂ ಬೆಳ್ತಂಗಡಿಯ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝಿ ಕನ್ನಡ ಭಾಷೆಯಲ್ಲಿ ನೆರವೇರಿಸಿದರು. ದೈಹಿಕ ಹಾಗೂ ಮಾನಸಿಕ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಿಕೊಟ್ಟರು.

ಕರ್ನಾಟಕದಾದ್ಯಂತದಿಂದ ಆಗಮಿಸಿರುವ 350 ಕ್ಕೂ ಮಿಕ್ಕಿ ಧರ್ಮಗುರುಗಳು ಹಾಗೂ ಸೇವಾದರ್ಶಿಗಳು ಮಹೋತ್ಸವದ ಐದು ದಿನಗಳಲ್ಲು ಭಕ್ತಾದಿಗಳ ಆಧ್ಯಾತ್ಮಿಕ ಸೇವೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ. 500 ಕ್ಕೂ ಮಿಕ್ಕಿ ಸ್ವಯಂಸೇವಕರು ವಿವಿಧ ವಿಭಾಗಗಳಲ್ಲಿ ಸೇವೆಯನ್ನು ನೀಡಿ ಮಹೋತ್ಸವ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ.

ಬುಧವಾರದಂದು ಉಡುಪಿ ಹಾಗೂ ಬೆಳ್ತಂಗಡಿ ಧರ್ಮಾಧ್ಯಕ್ಷರ ಹಬ್ಬದ ಬಲಿಪೂಜೆಗಳ ಹೊರತಾಗಿ, ಮಿಯಾರಿನ ವಂದನೀಯ ಜೇಸನ್ ಡಿ’ಸೋಜಾ, ಪೆರಂಪಳ್ಳಿಯ ವಂದನೀಯ ಅನಿಲ್ ಡಿ’ಕೋಸ್ಟಾ, ಬೈಂದೂರಿನ ವಂದನೀಯ ವಿನ್ಸೆಂಟ್ ಕುವೆಲ್ಲೊ, ಮಂಗಳೂರು ಜೆಪ್ಪು ಸೆಮಿನರಿಯ ರೆಕ್ಟರ್ ವಂದನೀಯ ರೊನಾಲ್ಡ್ ಸೆರಾವೊ, ಉಡುಪಿ ಶೋಕಮಾತಾ ದೇವಾಲಯದ ವಂದನೀಯ ವಲೇರಿಯನ್ ಮೆಂಡೊನ್ಸಾ, ಗಂಗೊಳ್ಳಿಯ ವಂದನೀಯ ಅಲ್ಬರ್ಟ್ ಕ್ರಾಸ್ತಾ ಹಾಗೂ ಚಿತ್ರದುರ್ಗ ಹಿರಿಯೂರಿನ ವಂದನೀಯ ಫ್ರಾಂಕ್ಲಿನ್ ಡಿ’ಸೋಜಾರವರು ಕೊಂಕಣಿ ಭಾಷೆಯಲ್ಲಿ ಬಲಿಪೂಜೆಗಳನ್ನು ನೆರವೇರಿಸಿದರು. ಚಿಕ್ಕಮಗಳೂರಿನ ವಂದನೀಯ ಡೇವಿಡ್ ಪ್ರಕಾಶ್ ಹಾಗೂ ಶಿವಮೊಗ್ಗದ ವಂದನೀಯ ಲಾರೆನ್ಸ್ ಡಿ’ಸೋಜಾರವರು ಕನ್ನಡ ಬಲಿಪೂಜೆಗಳನ್ನು ನೆರವೇರಿಸಿ ಭಕ್ತಾದಿಗಳಿಗಾಗಿ ಪ್ರಾರ್ಥಿಸಿದರು.

ಮಹೋತ್ಸವದ ಅಂತಿಮ ದಿನವಾದ ಗುರುವಾರ (ಜನವರಿ 30) ಮಾರ್ಗದರ್ಶಿ ಮಾತೆ ಮರಿಯಮ್ಮನವರ ಮಹೋತ್ಸವ. ಒಟ್ಟು ಹತ್ತು ಬಲಿಪೂಜೆಗಳು ನೆರವೇರಲಿವೆ: ಬೆಳಿಗ್ಗೆ 10.30 ಕ್ಕೆ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರವರಿಂದ ಕೊಂಕಣಿ ಭಾಷೆಯಲ್ಲಿ ಸಂಭ್ರಮದ ಹಬ್ಬದ ಬಲಿಪೂಜೆ ನೆರವೇರಲಿದೆ. ಬೆಳಿಗ್ಗೆ 7.00, 12.30, 2.00, 5.00, 8.00 ಹಾಗೂ 9.30 ಕ್ಕೆ ಕೊಂಕಣಿ ಭಾಷೆಯಲ್ಲಿ ಬಲಿಪೂಜೆಗಳು ಹಾಗೂ ಬೆಳಿಗ್ಗೆ 8.30, ಮದ್ಯಾಹ್ನ 3.30 ಮತ್ತು ಸಂಜೆ 6.30 ಕ್ಕೆ ಕನ್ನಡ ಬಲಿಪೂಜೆಗಳು ನೆರವೇರಲಿವೆ. ರಾತ್ರಿ 9.30 ರ ಬಲಿಪೂಜೆಯೊಂದಿಗೆ ಐದು ದಿನಗಳ ಮಹೋತ್ಸವಕ್ಕೆ ತೆರೆ ಬೀಳಲಿದೆ.


Spread the love