ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯೋಣ: ದಿನೇಶ್ ಗುಂಡೂರಾವ್

Spread the love

ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯೋಣ: ದಿನೇಶ್ ಗುಂಡೂರಾವ್
 

ಮಂಗಳೂರು: ಸಂವಿಧಾನದ ಮೂಲ ಅಂಶಗಳಾದ ಧರ್ಮನಿರಪೇಕ್ಷತೆ, ಜಾತ್ಯಾತೀತತೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವೆಲ್ಲರೂ ಗೌರವಿಸಬೇಕು. ದೇಶದ ಘನತೆ ಹಾಗೂ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು. ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ನಾವೆಲ್ಲರೂ ಸಿದ್ಧರಾಗಬೇಕು.

ಸಂವಿಧಾನದ ಆಶಯ ಜಾರಿಯಾದರೆ ಅದೇ ಮಹಾತ್ಮ ಗಾಂಧಿ ಆಶಿಸಿದ ನಿಜವಾದ ರಾಮರಾಜ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶುಕ್ರವಾರ ನಗರದ ನೆಹರು ಮೈದಾನದಲ್ಲಿ ದ.ಕ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಸಂದೇಶ ಭಾಷಣ ಮಾಡುತ್ತಿದ್ದರು.

ಗೌರವವಾರ್ಥವಾಗಿ ಬಸವಣ್ಣರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಿಸಿದೆ. ನಮ್ಮ ಸರ್ಕಾರಕ್ಕೆ ಬಸವಣ್ಣರಷ್ಟೇ ಅಲ್ಲದೇ ನಾರಾಯಣ ಗುರುಗಳು, ಅಲ್ಲಮ ಪ್ರಭು ಹಾಗೂ ವಿಶ್ವ ಮಾನವ ಸಂದೇಶ ನೀಡಿದ ಕುವೆಂಪುರವರು ಸದಾ ಪ್ರೇರಣೆಯಾಗಿದ್ದಾರೆ. ಇವರು ಹಾಕಿಕೊಟ್ಟ ಮಾರ್ಗದರ್ಶನದಂತೆಯೇ ನಮ್ಮ ಸರ್ಕಾರ ಆಡಳಿತ ನಡೆಸುತ್ತದೆ ಎಂದರು.

ರಾಮರಾಜ್ಯದ ನೈಜ ಪರಿಕಲ್ಪನೆಯೇ ಜನಾನುರಾಗಿ ಆಡಳಿತ. ನಾವು ಅಧಿಕಾರಕ್ಕೆ ಬಂದು ಕೇವಲ ಏಳು ತಿಂಗಳಲ್ಲಿ ಐದೂ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಪಿತೃವಾಕ್ಯ ಪರಿಪಾಲನೆಯ ಮೂಲಕ ಹಾಗೂ ಜನರ ಸಂಕಷ್ಟಗಳನ್ನು ಬಗೆಹರಿಸುವ ಮೂಲಕ ರಾಮ ಹೇಗೆ ಆದರ್ಶ ಪುರುಷನಾದನೋ ಅದೇ ರೀತಿ ರಾಮನ ಆದರ್ಶದಂತೆ ನಾಡಿನ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ನಾವು ನಿಜವಾದ ರಾಮರಾಜ್ಯದ ಆಡಳಿತ ನೀಡುತ್ತಿದ್ದೇವೆ. ಆದರೆ ಕೆಲವರು ಸರ್ವರಿಗೂ ಆದರ್ಶವಾದ ಹಾಗೂ ಸರ್ವರಿಗೂ ಪೂಜ್ಯನಿಯವಾದ ರಾಮನನ್ನು ಸಂಕುಚಿತಗೊಳಿಸುವ ಯತ್ನ ಮಾಡುತ್ತಿದ್ದಾರೆ. ರಾಮನ ಆದರ್ಶ ವ್ಯಕ್ತಿತ್ವ ನಮಗೆಲ್ಲರಿಗೂ ಸದಾ ಪ್ರೇರಣೆ ನೀಡುವಂತದ್ದು, ಎದೆಯಲ್ಲಿ ದ್ವೇಷ, ಮತ್ಸರ, ಅಸಹನೆ, ಅಸಹಿಷ್ಣುತೆ ತುಂಬಿಕೊಂಡು ರಾಮನ ಭಜನೆ ಮಾಡಿದರೆ ರಾಮನ ಕೃಪೆಗೆ ಪಾತ್ರರಾಗಲು ಸಾಧ್ಯವೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಸಂವಿಧಾನ ಸ್ಥಾಪನೆಯಾದ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತೀಯರಾದ ನಮ್ಮೆಲ್ಲರ ಮೇಲೆ ಸಂವಿಧಾನ ರಕ್ಷಿಸುವ ಮಹತ್ವದ ಜವಾಬ್ದಾರಿಯಿದೆ. ಇತ್ತೀಚೆಗೆ ಕೆಲವರು ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ್ದರು. ಸಂವಿಧಾನ ಬದಲಾಯಿಸುವುದು ಎಂದರೆ ಭಾರತದ ಅತ್ಮಕ್ಕೆ ಚೂರಿ ಹಾಕಿದಂತೆ. ಹಾಗಾಗಿ ಇಂತಹ ಅಪಾಯಕಾರಿ ಹೇಳಿಕೆ ನೀಡುವುದನ್ನು ನಾವೆಲ್ಲರೂ ಪಕ್ಷಾತೀತವಾಗಿ ಖಂಡಿಸಬೇಕಿದೆ. ಭಾರತದ ಸಂವಿಧಾನವನ್ನು ಒಪ್ಪಿಕೊಂಡ ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಒಕ್ಕೂಟ ವ್ಯವಸ್ಥೆ ನಿಂತಿರುವುದೇ ಪರಸ್ಪರ ಸಹಕಾರ ಮತ್ತು ಹೊಂದಿಕೊಂಡು ಹೋಗುವ ಗುಣಗಳಿಂದ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೂ ಸಮಾನ ಹಕ್ಕಿದೆ. ಸಮಾನ ಕರ್ತವ್ಯಗಳಿವೆ. ಇವುಗಳಲ್ಲಿ ತಾರತಮ್ಯವಾದರೆ ಇಡೀ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬೀಳಲಿದೆ. ಹಾಗಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದ ರೀತಿ ಎಚ್ಚರ ವಹಿಸ ಬೇಕೆಂದು ಎಂದರು.

ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಡಾ.ಮಂಜು ನಾಥ ಭಂಡಾರಿ, ಮನಪಾ ಮೇಯರ್ ಸುಧೀರ್ ಶೆಟ್ಟಿ, ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ‌.ಆನಂದ ಕೆ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮನಪಾ ಆಯುಕ್ತ ಆನಂದ ಸಿ.ಎಲ್ ಮೊದಲಾದವರು ಉಪಸ್ಥಿತರಿದ್ದರು.


Spread the love