ಸಂಸದರ ಎದುರೆ ಹೊಯ್-ಕೈ: ಬೈಂದೂರು ಭಾಜಪದಲ್ಲಿ ಭಿನ್ನಮತ ಸ್ಪೋಟ!

Spread the love

ಸಂಸದರ ಎದುರೆ ಹೊಯ್-ಕೈ: ಬೈಂದೂರು ಭಾಜಪದಲ್ಲಿ ಭಿನ್ನಮತ ಸ್ಪೋಟ!

ಉಡುಪಿ: ಕಳೆದ ಕೆಲ ತಿಂಗಳುಗಳಿಂದ‌ ಬೈಂದೂರು ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತ ಕೊನೆಗೂ ಸ್ಪೋಟಗೊಂಡಿದೆ. ಬೈಂದೂರು ಬಿಜೆಪಿ  ಮಂಡಲ‌ ಮಾಜಿ ಅಧ್ಯಕ್ಷ, ಬಿಜೆಪಿಯ ಪ್ರಭಾವ ರಾಜಕಾರಣಿ,‌ ರೈತ ಮುಖಂಡ ದೀಪಕ್‌ ಕುಮಾರ್‌ ಶೆಟ್ಟಿ ಹಾಗೂ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ನಡುವೆ ತಳ್ಳಾಟ ನಡೆದ  ಘಟನೆಯೊಂದು ಉಡುಪಿಯಲ್ಲಿ ಮಂಗಳವಾರ ವರದಿಯಾಗಿದೆ‌.

ಶಿವಮೊಗ್ಗ ಲೋಕಸಭಾ ಸಂಸದ ಬಿವೈ ರಾಘವೇಂದ್ರ ಅವರು ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಲಿರುವ ದಿಶಾ ಸಭೆಗೆ ಹಾಜರಾಗಲು ಶಾಸಕರೊಂದಿಗೆ ಬಂದಿದ್ದ ವೇಳೆ, ಉಪಹಾರ ಸೇವನೆ ಹಾಗೂ ವಿಶ್ರಾಂತಿಗಾಗಿ ಮಣಿಪಾಲದ‌ ಪ್ರಸಿದ್ದ ಖಾಸಗಿ‌ ಹೊಟೇಲ್ ಒಂದಕ್ಕೆ ಆಗಮಿಸಿದ್ದರು. ಈ ವೇಳೆ ಬೈಂದೂರು ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ‌ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು‌ ಶಾಸಕರು ಸಂಸದರ ಗಮನಕ್ಕೆ ತರುತ್ತಿದ್ದ ವೇಳೆ ದೀಪಕ್ ಕುಮಾರ್ ಶೆಟ್ಟಿ ಆಕ್ಷೇಪಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಇಬ್ಬರ ನಡುವೆ ನಡೆದ ವಾಕ್ಸಮರ ತಾರಕಕ್ಕೇರಿ ಹೊಯ್- ಕೈ ಆಗಿರುವ ಮಾಹಿತಿಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಬೈಂದೂರು ಮಂಡಲದ ಮಾಜಿ‌ ಅಧ್ಯಕ್ಷ ಹಾಗೂ ಸಂಸದ ಬಿವೈಆರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ದೀಪಕ್ ಕುಮಾರ್ ಶೆಟ್ಟಿ ಮಂಡಲ ಅಧ್ಯಕ್ಷ ಗಿರಿ ಹುದ್ದೆ ಕಳೆದುಕೊಂಡ ಬಳಿಕ ರೈತ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಬೈಂದೂರು ಪಟ್ಟಣ ಪಂಚಾಯತ್ ಗೆ ಗ್ರಾಮೀಣ ಪ್ರದೇಶಗಳನ್ನು ಸೇರ್ಪಡಿಸುವ ಅವೈಜ್ಞಾನಿಕ ನೀತಿಯ ವಿರುದ್ದ ರೈತ ಸಂಘದ ಮುಂದಾಳತ್ವದಲ್ಲಿ ಸಮಾನ ಮನಸ್ಕರೊಂದಿಗೆ ಬೈಂದೂರು ಹಾಗೂ ಜಲ್ಲಾಧಿಕಾರಿ ಕಚೇರಿ ಎದುರು ನಡೆದಿದ್ದ ರೈತ ಪ್ರತಿಭಟನೆಗಳು ದೀಪಕ್ ಶೆಟ್ಟರಿಗೆ ಹೊಸ ಇಮೇಜ್ ತಂದುಕೊಟ್ಟಿತ್ತು.

ಮಂಗಳವಾರ ಸಂಸದರ ಭೇಟಿಯ ವೇಳೆ ಇದೇ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾಗಿದ್ದ ಶಾಸಕ ಗಂಟಿಹೊಳೆಯವರ ಮಾತಿಗೆ ದೀಪಕ್ ಅಸಮಧಾನ ವ್ಯಕ್ತಪಡಿಸಿದ್ದರಿಂದ ಗಲಾಟೆ ಆರಭವಾಯಿತು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿದ್ದು, ಸ್ಥಳದಲ್ಲಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕುಂದಾಪುರ ಭಾಗದ ತಾ.ಪಂ ಮಾಜಿ ಸದಸ್ಯರೊಬ್ಬರ ಪ್ರಯತ್ನದಿಂದ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿದು ಬಂದಿದೆ.

ಇಂದಿನ‌ ಘಟನೆ ಹೇಗೆ ಇರಲಿ. ಬೈಂದೂರಿನಲ್ಲಿ ಕಳೆದ ಐದಾರು ತಿಂಗಳುಗಳಿಂದ ಪಕ್ಷದ ಒಳಗೆ‌ ನಡೆಯುತ್ತಿದ್ದ ಆಂತರಿಕ ಮನಕ್ಷೋಭೆ ಮಣಿಪಾಲದ ಹೊಯ್-ಕೈ ಮೂಲಕ‌ ಘಟಸ್ಪೋಟವಾಗಿದ್ದು, ಇದೀಗ ಚೆಂಡು ಅಂಕಣದ ಮಧ್ಯದಲ್ಲಿದ್ದು ಸಂಸದರು ಚೆಂಡನ್ನು ಯಾವ ಅಂಕಣಕ್ಕೆ‌ಎಸೆಯುತ್ತಾರೆ ಎನ್ನುವುದೇ ಕುತೂಹಲವಾಗಿದೆ.


Spread the love
Subscribe
Notify of

0 Comments
Inline Feedbacks
View all comments