ಸಕಲೇಶಪುರ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭ; ತಾತ್ಕಾಲಿಕ ವೇಗದ ನಿರ್ಬಂಧ!
ಹಾಸನ: ಎಡಕುಮಾರಿ-ಶಿರಿಬಾಗಿಲು ರೈಲ್ವೆ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ರೈಲ್ವೆ ಹಳಿಗೆ ಭಾರೀ ಪ್ರಮಾಣದ ಮಣ್ಣು ಬಿದ್ದಿದ್ದ ಪರಿಣಾಮ ರೈಲ್ವೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ ಮಳೆಯ ನಡುವೆ ರೈಲ್ವೇ ಇಲಾಖೆ ಯಶಸ್ವಿಯಾಗಿ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಳಿಸಿದ್ದು, ಇದೀಗ ಮತ್ತೆ ರೈಲು ಸಂಚಾರ ಪುನರಾರಂಭವಾಗಿದೆ.
ಶನಿವಾರ ರಾತ್ರಿ ಭಾರೀ ಮಳೆಯಿಂದಾಗಿ ಬೆಟ್ಟದ ಮಣ್ಣು ಮತ್ತು ಬಂಡೆಕಲ್ಲುಗಳು ರೈಲ್ವೆ ಹಳಿಯ ಮೇಲೆ ಕುಸಿದುಬಿದ್ದಿದ್ದವು. ಇದರಿಂದಾಗಿ ಬೆಂಗಳೂರಿನಿಂದ ಕರಾವಳಿ ಮತ್ತು ಕೇರಳ ಭಾಗವನ್ನು ಸಂಪರ್ಕಿಸುವ ಪ್ರಮುಖ ರೈಲುಗಳ ಸಂಚಾರ
ರೈಲು ಹಳಿಯ ಮೇಲೆ ಸಂಭವಿಸಿದ್ದ ಮಣ್ಣು ಕುಸಿತವನ್ನು ತೆರವುಗೊಳಿಸುವ ಹಾಗೂ ಹಳಿ ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳೂರು -ಬೆಂಗಳೂರು ರೈಲು ಸಂಚಾರ ಸೋಮವಾರ ರಾತ್ರಿ ಬಳಿಕ ಪುನರಾರಂಭಗೊಂಡಿದೆ.
ರೈಲ್ವೇ ಇಲಾಖೆಯು ಹಳಿ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಮಾರ್ಗವನ್ನು ಸುರಕ್ಷತ ಪರಿಶೀಲನೆಗೆ ಒಳಪಡಿಸಿತು. ಎಲ್ಲ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಅನಂತರ ಸೋಮವಾರ ರಾತ್ರಿ ರೈಲು ಸಂಚಾರಕ್ಕೆ ಮಾರ್ಗ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಯಿತು. ಬಳಿಕ ಪರೀಕ್ಷಾರ್ಥವಾಗಿ ಎಂಜಿನ್ ಓಡಿಸಿ ಹಳಿಯ ಸುರಕ್ಷೆಯನ್ನು ಖಚಿತಪಡಿಸಿಕೊಂಡ ನಂತರ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಯಿತು.
ಘಟನಾ ಸ್ಥಳದಲ್ಲಿ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗಂಟೆಗೆ 10ಕಿ.ಮೀ. ತಾತ್ಕಾಲಿಕ ವೇಗದ ನಿರ್ಬಂಧ ಜಾರಿಯಲ್ಲಿದೆ. ರೈಲು ಸಂಚಾರದ ಸಾಮಾನ್ಯ ವೇಳಾಪಟ್ಟಿಗಳನ್ನು ಹಂತಹಂತವಾಗಿ ಮರು ಹೊಂದಿಸಲಾಗುತ್ತದೆ. ಕೆಲ ವಿಳಂಬಗಳು ಮುಂದುವರಿದು ಬಳಿಕ ಎಂದಿನಂತೆ ರೈಲು ಸೇವೆ ಮುಂದುವರಿಯಲಿದೆ ಎಂದು ವರದಿಯಾಗಿದೆ.













