ಸಚಿವ ರಮಾನಾಥ್ ರೈಯವರಿಂದ ದೇಶದ ಅಖಂಡತೆಗೆ ದಕ್ಕೆ – ವೇದವ್ಯಾಸ ಕಾಮತ್

Spread the love

ಸಚಿವ ರಮಾನಾಥ್ ರೈಯವರಿಂದ ದೇಶದ ಅಖಂಡತೆಗೆ ದಕ್ಕೆ – ವೇದವ್ಯಾಸ ಕಾಮತ್

ಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ನಾಡಿನ ಯಾವುದೇ ಪ್ರಜೆಯ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುವುದಿಲ್ಲ ಎಂದು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ದೇಶದ ಅಖಂಡತೆಗೆ ದಕ್ಕೆ ತಂದು ಸಂವಿಧಾನಕ್ಕೆ ಅಗೌರವ ಸಲ್ಲಿಸಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಕಾಂಗ್ರೆಸ್ಸಿನ ಯಾರೋ ಕೆಲವು ಕಾರ್ಯಕರ್ತರು ಚಾಡಿ ಹೇಳಿದರು ಎನ್ನುವ ಕಾರಣಕ್ಕೆ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯವರನ್ನು ಐಬಿಗೆ ಕರೆಸಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಅವರನ್ನು ಕಠಿಣ ಸೆಕ್ಷನ್ ಐಪಿಸಿ 307ರಡಿಯಲ್ಲಿ ಬಂಧಿಸಲು ಸೂಚಿಸಿ, ಅವರು ಹೊರಗೆ ಬರದಂತೆ ತಾನು ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮಗೆ ಸಿಕ್ಕಿದ ಪ್ರಜಾತಾಂತ್ರಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಸೂಕ್ತ ದಾಖಲೆ, ದೂರು ಬೇಕಾಗುತ್ತದೆ. ಅವರು ತಮ್ಮ ಅಧಿಕಾರವನ್ನು ವಿನಾಕಾರಣ ಪ್ರಯೋಗಿಸುವಂತಿಲ್ಲ. ಆದರೆ ಸಚಿವರು ಬಂಧಿಸಲು ತಾಕೀತು ಮಾಡುವ ಮೂಲಕ ನಿಷ್ಠಾವಂತ ಅಧಿಕಾರಿಗಳನ್ನು ಅಡಕತ್ತರಿಗೆ ಸಿಲುಕಿಸುವ ಕೆಲಸ ಮಾಡಿದ್ದಾರೆ.

ಅಷ್ಟೇ ಅಲ್ಲದೆ ನೇತ್ರಾವತಿ ಹೋರಾಟಗಾರರನ್ನು ತಾನು ಬಂಧಿಸಲು ಹೇಳಿದರೂ ಪೊಲೀಸರು ಬಂಧಿಸಿಲ್ಲ, ಅನಗತ್ಯವಾಗಿ ದಿನದೂಡುತ್ತಿದ್ದಿರಿ ಎಂದು ಟೀಕಿಸುವ ಮೂಲಕ ತಮ್ಮ ಬೆಂಬಲಿಗರ ಎದುರು ಹಿರಿಯ ಅಧಿಕಾರಿಯನ್ನು ಮುಜುಗರಕ್ಕೆ ಈಡು ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ತಮ್ಮ ಚೇಲಾಗಳಂತೆ ನಡೆಸಿಕೊಳ್ಳುವ ಕಾಂಗ್ರೆಸ್ಸಿನ ಜನಪ್ರತಿನಿಧಿಗಳಿಂದ ರಾಜ್ಯ ಎಷ್ಟೆಲ್ಲಾ ಪ್ರಾಮಾಣಿಕ ಅಧಿಕಾರಿಗಳನ್ನು ಕಳೆದುಕೊಂಡಿದೆ ಎಂದು ಎಲ್ಲರಿಗೂ ಗೊತ್ತಿದೆ. ತಮ್ಮ ಸಚಿವ ಸ್ಥಾನ ದುರುಪಯೋಗ ಪಡಿಸಿಕೊಂಡ ರಮಾನಾಥ ರೈಯವರ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಕ್ಷಣ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ನಿರಂತರ ಹೋರಾಟ ನಡೆಸುವ ಮೂಲಕ ಅಧಿಕಾರಿಗಳ, ನೇತ್ರಾವತಿ ಹೋರಾಟಗಾರರ ಘನತೆಯನ್ನು ಎತ್ತಿ ಹಿಡಿಯಲಿದ್ದಾರೆ ಎಂದು ವೇದವ್ಯಾಸ ಕಾಮತ್ ತಿಳಿಸಿದ್ದಾರೆ.


Spread the love