ಸಮರ್ಪಕವಾಗಿ ಜಾರಿಗೆ ಬರುವುದಾದರೆ ಉತ್ತಮ ಬಜೆಟ್: ಎಸ್ಸೆಸ್ಸೆಫ್

Spread the love

ಸಮರ್ಪಕವಾಗಿ ಜಾರಿಗೆ ಬರುವುದಾದರೆ ಉತ್ತಮ ಬಜೆಟ್: ಎಸ್ಸೆಸ್ಸೆಫ್

ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ಅಲ್ಪಸ್ವಲ್ಪ ತಿದ್ದುಪಡಿಯೊಂದಿಗೆ ಸಮರ್ಪಕವಾಗಿ ಜಾರಿಯಾಗುವುದಾದರೆ ಉತ್ತಮ ಬಜೆಟ್ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಅಭಿಪ್ರಾಯಪಟ್ಟಿದ್ದಾರೆ.

ಪೇಷ್ ಇಮಾಂ ಮತ್ತು ಮೌಝಿನ್ ರ ಗೌರವಧನವನ್ನು ಹೆಚ್ಚಿಸಲಾಗಿರುವುದು ಶ್ಲಾಘನೀಯ. ಆದರೆ ಕಾಲ ಕಾಲಕ್ಕೆ ನಿಯಮಿತವಾಗಿ ಅದು ಫಲಾನುಭವಿಗಳಿಗೆ ತಲುಪುವಂತೆ ನೋಡಬೇಕಾಗಿದೆ. ಹಾಗೂ ಮದ್ರಸಾ ಮುಅಲ್ಲಿಮರಿಗೂ ಈ ಯೋಜನೆಯನ್ನು ವಿಸ್ತರಿಸುವ ನಿರೀಕ್ಷೆಯಿತ್ತು. ಮುಂದಿನ ಹಂತದಲ್ಲಿ ಇದನ್ನು ಸೇರ್ಪಡೆಗೊಳಿಸಬೇಕು.

ಮಡಿಕೇರಿಗೆ ವಿಮಾನ ನಿಲ್ದಾಣ ಘೋಷಣೆ ಮಾಡಿರುವುದು ಪ್ರಶಂಸಾರ್ಹ. ಎರಡು ವರ್ಷಗಳ ಮೊದಲು ಕರ್ನಾಟಕ ಯಾತ್ರೆಯ ಸಂದರ್ಭ ಎ.ಪಿ.ಉಸ್ತಾದ್ ಈ ಬೇಡಿಕೆಯನ್ನು ಇಟ್ಟಿದ್ದರು. ಗಲ್ಫ್ ನಿಂದ ಅತಂತ್ರರಾಗಿ ತಾಯ್ನಾಡಿಗೆ ಮರಳುವವರಿಗೆ ಪುನರ್ವಸತಿ ಯೋಜನೆ ರೂಪಿಸಬೇಕೆಂದು ಕೆಸಿಎಫ್ ಸಂಘಟನೆಯು ಇತ್ತೀಚೆಗೆ ಸರಕಾರವನ್ನು ಆಗ್ರಹಿಸಿತ್ತು. ಅದರಂತೆ ಕೇರಳ ಮಾದರಿಯ ಯೋಜನೆ ಘೋಷಣೆಯಾಗಿದೆ. ಆದರೆ ಇದನ್ನು ಬಡ್ಡಿರಹಿತಗೊಳಿಸಲು ಸರಕಾರ ಕ್ರಮ ಕೈಗೊಳ್ಳಬೇಕು.

ಮಂಗಳೂರಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಹಜ್ ಭವನ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿರುವುದು ಸಂತಸಾಯಕ. ಹೆಣ್ಮಕ್ಕಳು ತಮ್ಮ ಧರ್ಮಾನುಸಾರ ಸ್ಕಾರ್ಫ್ ಧರಿಸಿ ಸಾಮಾನ್ಯ ಶಾಲೆ ಕಾಲೇಜುಗಳಿಗೆ ತೆರಳಲು ಕೆಲವೆಡೆ ಅಡ್ಡಿಯಾಗುತ್ತಿದೆ. ಆದುದರಿಂದ ಮುಸ್ಲಿಂ ಹೆಣ್ಮಕ್ಕಳು ತಮ್ಮ ಧರ್ಮಾನುಸಾರ ವಸ್ತ್ರ ತೊಟ್ಟು ಶಿಕ್ಷಣ ಪಡೆಯಲು ತಾಲೂಕಿಗೊಂದರಂತೆ ಪ್ರತ್ಯೇಕ ಕಾಲೇಜು ತೆರೆಯುವ ಪ್ರಸ್ತಾಪ ಮಾಡಬೇಕಿತ್ತು. ಇದನ್ನು ಮುಂದಿನ ಹಂತದಲ್ಲಿ ಸರಕಾರ ಗಮನಿಸುಬಹುದೆಂದು ಆಶಿಸೋಣ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love