ಸರ್ವಕ್ಷೇಮ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಚಾಲನೆ

Spread the love

ಸರ್ವಕ್ಷೇಮ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಚಾಲನೆ

ಉಡುಪಿ: ಉಡುಪಿ ಜಿಲ್ಲೆಯ ಮೂಡುಗಿಳಿಯಾರಿನ ಯೋಗಬನದ ಪ್ರಕೃತಿ ಮಡಿಲಲ್ಲಿ ತಲೆಎತ್ತಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (ಸರ್ವಕ್ಷೇಮ) ಆಸ್ಪತ್ರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.

ಡಿವೈನ್ ಪಾರ್ಕ್ ಟ್ರಸ್ಟ್ನ ಅಂಗಸಂಸ್ಥೆಯಾದ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿ ಡಾ.ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. “ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಇಂದಿನ ಅಗತ್ಯವಾಗಿದೆ. ನಿಸರ್ಗದ ಮಡಿಲಲ್ಲಿ ಆಸ್ಪತ್ರೆ ಇರುವುದರಿಂದ ಇಲ್ಲಿ ದೊರೆಯುವ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಾಸ್ತುಶಿಲ್ಪ ಹಾಗೂ ಪ್ರಾಚೀನ ಶೈಲಿಯಿಂದಾಗಿ ಆಸ್ಪತ್ರೆ ಪ್ರಕೃತಿಗೆ ಹತ್ತಿರವಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಬಳಕೆಮಾಡಿಕೊಂಡಿರುವುದು ಇದರ ಹೆಮ್ಮೆ’ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ಇಲ್ಲಿಯ ಪರಿಸರದಲ್ಲಿ ಚಿಕಿತ್ಸೆ ಸಿಗುವುದು ನಮ್ಮ ಪುಣ್ಯ. ಆಧುನಿಕತೆಯಿಂದಾಗಿ ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡುವವರು ಇಲ್ಲಿ ಬಂದು ನೆಮ್ಮದಿ ಹುಡುಕಬಹುದು’ ಎಂದರು.

ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಎಚ್.ಆರ್.ನಾಗೇಂದ್ರ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, “ಯೋಗ, ಧ್ಯಾನ ಹಾಗೂ ಪ್ರಕೃತಿ ಚಿಕಿತ್ಸೆ ಸಿಗುವಂತಹ ಜಾಗದಲ್ಲಿ ವಿವೇಕಾನಂದರ ಪ್ರತಿಮೆ ಕಾಣಲು ಸಿಗಲಿದೆ. ಅವರು ನಡೆದ ಹಾದಿ ಇಲ್ಲಿ ನಮಗೆ ನೆನಪಾದರೆ ಅದಕ್ಕಿಂತ ಅರ್ಥಪೂರ್ಣವಾದ ಕೆಲಸ ಬೇರೆ ಇಲ್ಲ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್ಪಾರ್ಕ್ ಟ್ರಸ್ಟ್ನ ಆಡಳಿತ ನಿರ್ದೇಶಕರಾದ ಡಾಕ್ಟರ್ಜೀ (ಡಾ. ಚಂದ್ರಶೇಕರ್ ಉಡುಪ) ಮಾತನಾಡಿ, “ಶಾಂತಿ, ನೆಮ್ಮದಿ ಅರಸುವವರಿಗೆ ಇದು ಪ್ರಶಸ್ತ ಜಾಗ. ಪ್ರಕೃತಿ ಚಿಕಿತ್ಸೆ ಇವತ್ತು ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ಜನರಲ್ ಮ್ಯಾನೇಜರ್ ನಾಗರಾಜ್, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಪಿ ಎಸ್ ಯಡಪಡಿತ್ತಾಯ, ಬೆಂಗಳೂರು ಆರೋಗ್ಯಧಾಮ ವೆಲ್ನೆಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೆಂದ್ರಗಳು ಇದರ ಡಾ|ವೈ ರುದ್ರಪ್ಪ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನಲ್ಸ್ ಇದರ ಡೀನ್ ಡಾ|ಜಿ ಅರುಣ ಮಯ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕೃತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಉಜಿರೆ ಇದರ ಪ್ರಾಂಶುಪಾಲರಾದ ಡಾ|ಪ್ರಶಾಂತ್ ಶೆಟ್ಟಿ, ಭಾರತೀಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಪದವೀಧರರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಡಾ|ನವೀನ್ ಕೆ. ವಿ, ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನ ಸಂಸ್ಥೆ ನವದೆಹಲಿ ಇದರ ನಿರ್ದೇಶಕರಾದ ಡಾ|ರಾಘವೇಂದ್ರ ರಾವ್ ಎಮ್, ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಜಿಗಣಿ ಇದರ ಸಂಶೋಧನ ವಿಭಾಗದ ನಿರ್ದೇಶಕರಾದ ಡಾ|ಮಂಜುನಾಥ್ ಎನ್ ಕೆ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷರಾದ ವನಿತಾ ಶ್ರೀಧರ ಆಚಾರ್ಯ, ಯುಎಸ್ ಎ ಯೋಗ ಭಾರತಿ ಇದರ ರಘುರಾಮ್ ಜೀ ಹಾಗೂ ಇತರರು ಉಪಸ್ಥಿತರಿದ್ದರು.

ಸರ್ವಕ್ಷೇಮ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ|ವಿವೇಕ್ ಉಡುಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಆಸ್ಪತ್ರೆ ವಿಶೇಷತೆ: ಪ್ರಾಚೀನ ದೇಗುಲದ ಪರಂಪರೆಯ ವಾಸ್ತುವಿನ್ಯಾಸ ಹೊಂದಿದ ಜಗತ್ತಿನ ಪ್ರಥಮ ಯೋಗ ಆಸ್ಪತ್ರೆ ಇದಾಗಿದೆ. ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿ ಈ ಆಸ್ಪತ್ರೆಯನ್ನು ರಚಿಸಿಸಲಾಗಿದೆ. ಆಯುಷ್ ವಿಭಾಗದಲ್ಲಿ ದೇಶದ ಪ್ರಥಮ ಪರಿಸರ ಸ್ನೇಹಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಇದಾಗಿದ್ದು ಕರಾವಳಿಯ ಪ್ರಾಚೀನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪ್ರಕೃತಿ ಯೋಗ, ಆಹಾರ, ಆಧ್ಯಾತ್ಮಿಕ, ಸಂಗೀತ, ಹಸಿರು, ಹಾಸ್ಯ, ಮೌನ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುವುದು. ನಮ್ಮ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ನ ನಿಬಂಧನೆ ಪ್ರಕಾರವೇ ಕಟ್ಟಡವನ್ನು ರಚಿಸಲಾಗಿದೆ. ಪರಿಸರ ಸ್ನೇಹಿ ಆಸ್ಪತ್ರೆಯಲ್ಲಿ ಶುದ್ಧವಾದ ಗಾಳಿ, ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಶುಚಿತ್ವ, ಸ್ನಾನ ಸೇರಿದಂತೆ ಯಾವೆಲ್ಲ ನೀರನ್ನು ಉಪಯೋಗಿಸುತ್ತೇವೆ ಆ ಎಲ್ಲಾ ನೀರನ್ನು ಶುದ್ಧೀಕರಿಸುವ ಘಟಕವನ್ನು ರಚಿಸಿದ್ದೇವೆ. 15 ಕಿಲೋವ್ಯಾಟ್ ಸೋಲಾರ್ ಎನರ್ಜಿ ಉತ್ಪಾದನೆಗೆ ವ್ಯವಸ್ಥೆ ಮಾಡಲಾಗಿದೆ. ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ 1.2 ಕಿ.ಮೀ. ಉದ್ದದ ವಾಕಿಂಗ್ ಟ್ರ್ಯಾಕ್ನ್ನು ನಿರ್ಮಿಸಲಾಗಿದೆ. ಇದರ ಜೊತೆಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುವುದು.

ಒಂದು ವಾರದ ಚಿಕಿತ್ಸೆಗೆ ಭಾಗಿಯಾಗುವವರಿಗೆ ಚಿಕ್ಕದಾದ ಟೇಬಲ್ ಟೆನ್ನಿಸ್ ಕೋರ್ಟ್, ಶಟಲ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟ್ನ್ನು ನಿರ್ಮಿಸಲಾಗಿದೆ. ವಾರದಲ್ಲಿ 2 ದಿನ ರಾತ್ರಿ ಊಟದ ನಂತರ ಸುಪ್ತ ಪ್ರತಿಭೆ ಪ್ರಕಟಿಸಲು ಹ್ಯಾಪಿ ಅಸೆಂಬ್ಲಿ ನಡೆಸಲಾಗುವುದು. ಒಟ್ಟಾರೆ ಇಲ್ಲಿಗೆ ಚಿಕಿತ್ಸೆಗೆ ಬರುವವರು ತಮ್ಮ ನೋವನ್ನು ಮರೆತು ಅತ್ಯಂತ ಸಂತೋಷ, ಶಾಂತಿ, ಆಸಕ್ತಿ, ನೆಮ್ಮದಿಯಿಂದ ಕಾಲ ಕಳೆಯಲು ಬೇಕಾದ ಎಲ್ಲಾ ಅವಕಾಶ ನೀಡಲಾಗುವುದು. ಹಿರಿಯ ನಾಗರಿಕರ ಚಿಕಿತ್ಸೆಗೆ ಅನುಕೂಲವಾಗಲು ಪ್ರತಿಯೊಂದು ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಬೆಳಿಗ್ಗೆಯಿಂದ ಸಂಜೆ ತನಕ ಈ ಚಿಕಿತ್ಸೆ ನೀಡಲಾಗುವುದು. ರೋಗಿಗಳನ್ನು ವಾರದಲ್ಲಿ ಒಂದು ದಿನ ಸಮೀಪದ ಕೆಲವೊಂದು ಪ್ರಾಚೀನ ಪಾರಂಪರಿಕ ಕ್ಷೇತ್ರಕ್ಕೆ ಹಾಗೂ ಬೀಚ್ಗೆ ಕರೆದೊಯ್ಯಲಾಗುವುದು. ಔಷಧಿ ರಹಿತವಾಗಿ ಇಲ್ಲಿ ಚಿಕಿತ್ಸೆಗೆ ಮಹತ್ವ ನೀಡಲಾಗುತ್ತದೆ. ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೋದ್ಧಾರದ ಬೇರೆ ಬೇರೆ ಯೋಜನೆಗಳಲ್ಲಿ ಅಧ್ಯಾತ್ಮ, ಆರೋಗ್ಯ, ಯೋಗದ ಮಹಿಮೆಯನ್ನು ತಿಳಿಸಿಕೊಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.

ಸ್ವಾಮಿ ವಿವೇಕಾನಂದರ ಪ್ರತಿಮೆ: ಡಿವೈನ್ ಪಾರ್ಕ್ನಲ್ಲಿ ಕಳೆದ 35 ವರ್ಷಗಳಿಂದ ಸ್ವಾಮಿ ವಿವೇಕಾನಂದರ ಧೆಯೋದ್ಧೇಶ, ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರೋದ್ಧಾರ ಕೆಲಸವನ್ನು ನನಸಾಗಿಸುವಲ್ಲಿ ಡಾ. ಚಂದ್ರಶೇಖರ ಉಡುಪರ, ಡಾಕ್ಟರ್ಜಿಯವರ ನಿರ್ದೇಶನದಲ್ಲಿ ಮಾಡುತ್ತಾ ಬಂದಿದೆ. ಆಸ್ಪತ್ರೆಯ ಕೇಂದ್ರ ಭಾಗದಲ್ಲಿ ಜಗತ್ತಿನಲ್ಲೇ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕಾಂಕ್ರಿಟ್ ಬ್ಲಾಕ್ನಲ್ಲಿ ನಿರ್ಮಿಸಲಾದ 35ಅಡಿ ಎತ್ತರದ ಈ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಈ ಪ್ರತಿಮೆಯನ್ನು ಗಿನ್ನೆಸ್ ಬುಕ್ ರೆಕಾರ್ಡ್ಗೆ ರಿಜಿಸ್ಟರ್ ಮಾಡಲಾಗಿದೆ. ಪ್ರತಿಮೆಗೆ ವಿಶೇವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹಸಿರು ಹುಲ್ಲು ಹಾಸಿನ ನಡುವೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಮಳೆಗಾಳಿ ಸೇರಿದಂತೆ ಪ್ರಕೃತಿಯಿಂದ ಆಗಬಹುದಾದ ಹಾನಿಯನ್ನು ತಪ್ಪಿಸಲು ರಕ್ಷಣೆ ನೀಡಲಾಗಿದೆ.


Spread the love