ಸಾಗರ್ ಮಾಲಾ ಮತ್ತು ಭಾರತ್ ಮಾಲಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಸಚಿವ ಗಡ್ಕರಿ ಶಿಲನ್ಯಾಸ

Spread the love

ಸಾಗರ್ ಮಾಲಾ ಮತ್ತು ಭಾರತ್ ಮಾಲಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಸಚಿವ ಗಡ್ಕರಿ ಶಿಲನ್ಯಾಸ

ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸಾಗರ್ ಮಾಲಾ ಮತ್ತು ಭಾರತ್ ಮಾಲಾ ಯೋಜನೆ ಯಡಿಯಲ್ಲಿ ರೂ.3924.00 ಕೋಟಿ ಅನುದಾನದಲ್ಲಿ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಇಂದು ಮಾನ್ಯ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರಾದ ನಿತಿನ್ ಗಡ್ಕರಿಯವರು ವಿಡಿಯೋ ಕಾನ್ಪರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿದರು.

ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಾಣೂರು ಜಂಕ್ಷನ್ನಿಂದ ಬಿಕರ್ನಕಟ್ಟೆ ವರೆಗಿನ ರಸ್ತೆಯನ್ನು 4 ಪಥಗಳಾಗಿ ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ₹ 1,163 ಕೋಟಿ ವೆಚ್ಚದಲ್ಲಿ 41.1 ಕಿಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೂ ಶಿಲಾನ್ಯಾಸ ನಡೆಯಿತು. ಮೂಲ್ಕಿ – ಕಟೀಲ್, ಬಜ್ಪೆ, ಪೊಳಲಿ, ಬಿ.ಸಿ.ರೋಡು, ತೊಕ್ಕುಟ್ಟು ಮಾರ್ಗದ ಸಿಟಿ ರಿಂಗ್ ರೋಡ್ ನಡುವಿನ 91.2 ಕಿಮೀ ಉದ್ದ ರಸ್ತೆಯು ₹2,500 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು, ಈ ಕಾಮಗಾರಿಯ ಶಿಲಾನ್ಯಾಸವೂ ನಡೆಯಿತು. ಅದೇ ರೀತಿ ₹ 65 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕೂಳೂರು 6 ಪಥಗಳ ಸೇತುವೆಗೂ ಶಿಲಾನ್ಯಾಸ ನಡೆಯಿತು. ಈ ಎಲ್ಲ ಯೋಜನೆಗಳನ್ನು ಭಾರತ್ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ.

ಕುಲಶೇಖರ– ಕಾರ್ಕಳ ರಸ್ತೆಯ ಡಾಂಬರೀಕರಣಕ್ಕೆ ₹ 12 ಕೋಟಿ, ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಪುಂಜಾಲಕಟ್ಟೆ – ಚಾರ್ಮಾಡಿ ನಡುವಿನ ರಸ್ತೆ ಡಾಂಬರೀಕರಣಕ್ಕೆ ₹ 10 ಕೋಟಿ, ಮಾಣಿ– ಸಂಪಾಜೆ 40 ಕಿ.ಮೀ. ಉದ್ದದ ರಸ್ತೆ ಡಾಂಬರೀಕರಣಕ್ಕೆ ₹ 20 ಕೋಟಿ ಹಣ ಮೀಸಲಿಡಲಾಗಿದೆ. ಅಲ್ಲದೆ ಎನ್ಐಟಿಕೆ– ಬಿ.ಸಿ.ರೋಡ್ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಾಂಬರೀಕರಣಕ್ಕಾಗಿ ₹ 24 ಕೋಟಿ ಬಿಡುಗಡೆ ಮಾಡಲಾಗಿದೆ

ಪಣಂಬೂರು ಎನ್.ಎಂ.ಪಿ.ಟಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಾಜಿ ಉಪ ಮೇಯರ್ ಕು. ಸುಮಿತ್ರಾ ಕರಿಯ, ಎನ್.ಎಚ್.ಈ.ಐ, ಎನ್.ಎಂ.ಪಿ.ಟಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.


Spread the love