ಸಾಧಕರ ಸನ್ಮಾನದೊಂದಿಗೆ ಸಮುದಾಯೋತ್ಸವ್-2020ಕ್ಕೆ ಅದ್ದೂರಿ ತೆರೆ

Spread the love

ಸಾಧಕರ ಸನ್ಮಾನದೊಂದಿಗೆ ಸಮುದಾಯೋತ್ಸವ್-2020ಕ್ಕೆ ಅದ್ದೂರಿ ತೆರೆ

ಉಡುಪಿ: ಪ್ರತಿಯೊಬ್ಬರಿಗೂ ಕೂಡ ತನ್ನದೇ ಆದ ಪ್ರತಿಭೆಗಳಿದ್ದು ಅದನ್ನು ಸಮಾಜದ ಒಳಿತಿಗೆ ಉಪಯೋಗಿಸಿದಾಗ ಸಿಗುವ ಪ್ರತಿಫಲ ಅಪರಿಮಿತವಾದದ್ದು ಆದ್ದರಿಂದ ಸಿಕ್ಕ ಅವಕಾಶಗಳನ್ನು ಸದುಪಯೋಗಗೊಳಿಸುವುದರೊಂದಿಗೆ ಪ್ರತಿಭೆಗಳನ್ನು ಸಮಾಜಕ್ಕೆ ತೋರ್ಪಡಿಸುವ ಕೆಲಸ ಕ್ರೈಸ್ತ ಸಮುದಾಯದಿಂದ ನಡೆಯಬೇಕಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿವಂ|ಡಾ| ಪೀಟರ್ ಪಾವ್ಲ್ ಸಲ್ಡಾನಾ ಹೇಳಿದರು.

ಅವರು ಭಾನುವಾರ ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 2020 ಜನವರಿ 19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಿರುವ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.

ಕ್ರೈಸ್ತ ಸಮುದಾಯ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ ಕೂಡ ದೇಶದ ಅಭಿವೃದ್ಧಿಯಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಸೇವೆ ತನ್ನದೇ ಆದ ಸೇವೆಯನ್ನು ನೀಡಿಕೊಂಡು ಬಂದಿದೆ. ಕ್ರೈಸ್ತ ಸಮುದಾಯ ಸದಾ ಶಿಸ್ತು ಮತ್ತು ಶಾಂತಿಯನ್ನು ಬಯಸುವ ಸಮುದಾಯವಾಗಿದ್ದು ಯಾವುದೇ ಕ್ಲಿಷ್ಟಕರ ವಿಚಾರಗಳು ಬಂದಾಗ ಅದಕ್ಕೆ ಪ್ರತಿಕ್ರಿಯೆ ನೀಡದೆ ಮೌನವಹಿಸುತ್ತಿದ್ದು ಇದರ ಲಾಭವನ್ನು ಇತರರು ಪಡೆಯುವ ಕೆಲಸ ನಡೆಯುತ್ತಿದೆ. ಇದರಿಂದ ಕ್ರೈಸ್ತ ಸಮುದಾಯವನ್ನು ತಪ್ಪಾಗಿ ಬಿಂಬಿಸುವ ಪ್ರಯತ್ನ ಕೂಡ ನಡೆಯುತ್ತಿದ್ದು ಈ ವಿಚಾರದಲ್ಲಿ ಕ್ರೈಸ್ತ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ. ಕ್ರೈಸ್ತ ಸಮುದಾಯದ ನಾಯಕತ್ವ ಕೇವಲ ತಮ್ಮ ಸಮುದಾಯದ ದೇವಾಲಯದ ನಾಲ್ಕು ಗೋಡೆಗಳ ಒಳಗೆ ತೋರಿಸದೆ ಸಮಾದಲ್ಲಿ ಕೂಡ ತಮ್ಮ ಸೇವೆಯ ಮೂಲಕ ನಾಯಕತ್ವವನ್ನು ಪ್ರತಿಫಲಿಸಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಅವರು ಮಾತನಾಡಿ ಕ್ರೈಸ್ತ ಸಮುದಾಯದ ಮೇಲೆ ಹಲವಾರು ಬಾರಿ ಭಯದ ಕರಿನೆರಳು ಕಾಣುವ ಲಕ್ಷಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಸಮುದಾಯ ಈ ನಿಟ್ಟಿನಲ್ಲಿ ಜಾಗೃತರಾಗಬೇಕಾಗಿದೆ. ಸಮುದಾಯದಲ್ಲಿ ನಾಯಕತ್ವ ಹೊಂದಿರುವವರು ಹಲವಾರು ಮಂದಿ ಇದ್ದರೂ ರಾಜಕೀಯ ನಾಯಕತ್ವ ಕಡಿಮೆಯಾಗಿದ್ದು ಈ ನಿಟ್ಟಿನಲ್ಲಿ ಕ್ರೈಸ್ತ ಸಮುದಾಯದ ನಾಯಕರು ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.

ಕಾರ್ಯಕ್ರದ ವಿಚಾರಗೋಷ್ಠಿಯ ಮೇಲೆ ನಡೆದ ಚರ್ಚೆಯ ಮೇಲೆ ಸರಕಾರ ಹಾಗೂ ಧರ್ಮಪ್ರಾಂತ್ಯದ ಹಂತದಲ್ಲಿ ಮಾಡಲಾದ 9 ನಿರ್ಣಯಗಳನ್ನು ಸಮಿತಿಯ ಮುಖ್ಯಸ್ಥ ವಾಲ್ಟರ್ ಸಿರಿಲ್ ಪಿಂಟೊ ಸಭೆಯ ಮುಂದಿಟ್ಟರು.

ಇದೇ ಸಂದರ್ಭದಲ್ಲಿ ಉಡುಪಿ ಮೂಲದವರಾಗಿದ್ದು, ಕಳೆದ 2 ವರ್ಷಗಳಿಂದ ಹೊರ ದೇಶ, ರಾಜ್ಯಗಳಲ್ಲಿ ಸಾಧನೆ ಮಾಡಿದವರಿಗೆ, ಸಹಕಾರಿ ಸಂಘ ಹಾಗೂ ಎ.ಪಿ.ಎಮ್.ಸಿ ಗಳಲ್ಲಿ ನಿರ್ದೇಶಕರಾಗಿದ್ದವರಿಗೆ, ಗಜೆಟೆಡ್ ಮತ್ತು ಅದಕ್ಕಿಂತ ಉನ್ನತ ಹಂತದ ಅಧಿಕಾರಿಗಳಿಗೆ ಹಾಗೂ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಕ್ರೈಸ್ತ ನಾಯಕರಿಗೆ ಸನ್ಮಾನಿಸಲಾಯಿತು. ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಯುವಜನರು ಭೋಜನ ವಿರಾಮದ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುಪಡಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಪತ್ರಕರ್ತ ಜಾನ್ ಡಿಸೋಜಾ, ಕುಂದಾಪುರ (ಸಮೂಹ ಮಾಧ್ಯಮ), ಪ್ರಗತಿಪರ ಕೃಷಿಕ ಜೂಲಿಯನ್ ದಾಂತಿ (ಭತ್ತದ ಕೃಷಿ), ಸಮಾಜ ಸೇವಕ ರೋಶನ್ ಡಿಸೋಜಾ ಬೆಳ್ಮಣ್ (ಸಮಾಜಸೇವೆ), ನಾಟಿ ವೈದ್ಯ ಜೆರೋಮ್ ಫ್ರಾನ್ಸಿಸ್ ಅಂದ್ರಾದೆ ಕಲ್ಮಾಡಿ (ಮನೆ ಮದ್ದು) ಹಾಗೂ ಸಹಕಾರಿ ಧುರೀಣ ಜಾನ್ ಡಿಸಿಲ್ವಾ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಎಐಸಿಸಿ ಸದಸ್ಯೆ ಜೆನೆಟ್ ಡಿ’ಸೋಜಾ, ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜೋಯ್ಲಸ್ ಡಿಸೋಜಾ, ಮುಂಬೈ ಮೊಡೆಲ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಆಲ್ಬರ್ಟ್ ಡಿಸೋಜಾ, ಮಂಗಳೂರು ಎಮ್ ಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ, ಎಐಸಿಯು ಅಧ್ಯಕ್ಷರಾದ ಲ್ಯಾನ್ಸಿ ಡಿಕುನ್ಹಾ, ಮುಂಬೈ ಕೆಥೊಲಿಕ್ ಸಭಾ ಅಧ್ಯಕ್ಷರಾದ ರಫಾಯೆಲ್ ಡಿಸೋಜಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನಿಯೋಜಿತ ಅಧ್ಯಕ್ಷರಾದ ರೋಬರ್ಟ್ ಮಿನೇಜಸ್, ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, , ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ|ಲೆಸ್ಲಿ ಡಿಸೋಜಾ ಪಾಲನಾ ಸಮಿತಯ ಉಪಾಧ್ಯಕ್ಷರಾದ ಬ್ಯಾಪ್ಟಿಸ್ಟ್ ಡಾಯಸ್, ಮಾಜಿ ಜಿಪಂ ಅಧ್ಯಕ್ಷರಾದ ಜೆರಾಲ್ಡ್ ಫೆರ್ನಾಂಡಿಸ್, ಗ್ಲ್ಯಾಡಿಸ್ ಆಲ್ಮೇಡಾ, ಎಐಸಿಯು ರಾಜ್ಯಾಧ್ಯಕ್ಷ ಆಸ್ಸಿಸಿ ಗೊನ್ಸಾಲ್ವಿಸ್, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ವಲಯ ಅಧ್ಯಕ್ಷರಾದ ರೊನಾಲ್ಡ್, ಹೆರಿಕ್, ಸಮುದಾಯೋತ್ಸವ-2020 ಕಾರ್ಯದರ್ಶಿ ಮೇರಿ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆ ಉಡುಪಿ ಧರ್ಮಪ್ರಾಂತ್ಯ ಇದರ ಅಧ್ಯಕ್ಷೆ ಪ್ರಮೀಳಾ ಡೆಸಾ ಉಪಸ್ಥಿತರಿದ್ದರು. ಹಾಗೂ ಇತರರು ಉಪಸ್ಥಿತರಿದ್ದರು.

ಸಮುದಾಯೋತ್ಸವ-2020 ಸಂಚಾಲಕ ಎಲ್ ರೋಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ ವಂದಿಸಿದರು. ಎಡ್ವರ್ಡ್ ಲಾರ್ಸನ್ ಡಿಸೋಜಾ, ಸುಜಾ ಡಿಸೋಜಾ ಮತ್ತು ಜೆನೆವಿವ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


Spread the love