ಸಾರ್ವಜನಿಕರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅಧ್ಯಕ್ಷತೆಯಲ್ಲಿ ನೇರ ಫೋನ್ ಇನ್

Spread the love

ಸಾರ್ವಜನಿಕರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅಧ್ಯಕ್ಷತೆಯಲ್ಲಿ ನೇರ ಫೋನ್ ಇನ್
ಉಡುಪಿ : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸಲು ನೇರ ಫೋನ್ ಇನ್ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 44 ದೂರುಗಳನ್ನು ಆಲಿಸಿ ಪರಿಹಾರ ಕೊಡಲು ಕ್ರಮಕೈಗೊಳ್ಳಲಾಯಿತು. ಇದರಲ್ಲಿ ಒಂದು ದೂರು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಸಂಬಂದಿಸಿದ್ದು.

ಇದಲ್ಲದೆ ಸಾರ್ವನಿಕ ದೂರು ನಿವಾರಣಾ ಮತ್ತು ಉಸ್ತುವಾರಿ ವ್ಯವಸ್ಥೆಗಾಗಿ ಉಡುಪಿ ಜಿಲ್ಲಾಡಳಿತದ ಅಧಿಕೃತ ವೆಬ್‍ಸೈಟ್‍ನಲ್ಲಿ ಪಬ್ಲಿಕ್ ಗ್ರಿವೆನ್ಸ್‍ಸ್ ಲಿಂಕ್ ನ್ನು ಸೇರ್ಪಡೆಗೊಳಿಸಲಾಗಿದ್ದು, ಸಾರ್ವಜನಿಕರ ದೂರು ನಿವಾರಿಸಲು ಪ್ರಥಮಾದ್ಯತೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ಕಳುಹಿಸಲು ಪ್ರತಿಯೊಂದು ಇಲಾಖೆಗೂ ಪ್ರತ್ಯೇಕ ಯೂಸರ್ ಐಡಿ ಮತ್ತು ಪಾಸ್‍ವರ್ಡ್‍ಗಳನ್ನು ನೀಡಲಾಗಿದೆ. ಇದಕ್ಕೆ ಉತ್ತರಿಸಲು ಸಮಯಮಿತಿಯನ್ನು ನಿಗದಿಗೊಳಿಸಿದೆ.

ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಕುಡಿಯುವ ನೀರು, ಕಂದಾಯ ಇಲಾಖೆ ಸಮಸ್ಯೆ, ಸ್ಮಶಾನ ಭೂಮಿ, ಕ್ರಷರ್ ಸಮಸ್ಯೆ, ಬಿಎಸ್‍ಎನ್ ಎಲ್ ದೂರವಾಣಿ ಸಮಸ್ಯೆ, ಬೈಂದೂರು ವ್ಯಾಪ್ತಿಯಲ್ಲಿ ಧೂಳಿನಿಂದಾಗಿ ಆರೋಗ್ಯ ಹದಗೆಡುತ್ತಿರುವ ಬಗ್ಗೆ, ಬೈಂದೂರಿನ ಉಪ್ಪುಂದದಲ್ಲಿ ಹೊಳೆಗೆ ಅಣೆಕಟ್ಟು ಕಟ್ಟಿರುವುದನ್ನು ಉಳಿಸಿಕೊಡಿ ಎಂದು ಜಿಲ್ಲಾಧಿಕಾರಿಗಳನ್ನು ಕೋರಿದರು. ಚಾಂತಾರುವಿನ ದೇವಾಲಯದ ಅರ್ಚಕರ ತಸ್ತೀಕ್ ಬಟವಾಡೆಯಾಗದಿರುವ ಬಗ್ಗೆ, ಕಟಪಾಡಿಯಲ್ಲಿ ಬೋರ್‍ವೆಲ್ ಕೊರೆದು ಶಾಲೆಗಳಲ್ಲಿ ನೀರು ಬತ್ತಿ ಸಮಸ್ಯೆ ಎದುರಿಸುತ್ತಿರುವ ಕುರಿತು ಜಿಲ್ಲಾಧಿಕಾರಿಗಳ ಗಮನಸೆಳೆದರು.

ಕುಂದಾಪುರದ ಗ್ರಾಮಾಂತರ ವ್ಯಾಪ್ತಿಯಲ್ಲಿ ಹಳೆ ಬಸ್ಸುಗಳನ್ನು ಓಡಿಸುವ ಬಗ್ಗೆ, ಮಠದಕೆರೆಯ ಹೂಳೆತ್ತಲು, ಅಕ್ರಮ ಮರಳುಗಾರಿಕೆ ಸಮಸ್ಯೆ ಇಲ್ಲೂ ಪ್ರತಿಧ್ವನಿಸಿತು. ಹಕ್ಕುಪತ್ರ ಬೇಡಿಕೆ, ಪಾದಾಚಾರಿ ರಸ್ತೆ, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ, ಜೂಜಾಟ, ಕಸ ವಿಲೆ ಬಗ್ಗೆಯೂ ಸಾರ್ವಜನಿಕರು ಫೋನ್ ಮಾಡಿ ಪರಿಹಾರ ಕೇಳಿದರು.
ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love