ಸಾವಿರಾರು ರೂ. ಮೌಲ್ಯದ ಗಾಂಜಾ ಸಹಿತ ಆರೋಪಿಯ ಬಂಧನ

Spread the love

ಸಾವಿರಾರು ರೂ. ಮೌಲ್ಯದ ಗಾಂಜಾ ಸಹಿತ ಆರೋಪಿಯ ಬಂಧನ

ಬಂಟ್ವಾಳ: ಗಾಂಜಾ ಮಾರಾಟ ಆರೋಪದ ಮೇರೆಗೆ ಸಾವಿರಾರು ರೂ. ಮೌಲ್ಯದ ಗಾಂಜಾ ಸಹಿತ ವ್ಯಕ್ತಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಶನಿವಾರ ತುಂಬೆ ಸಮೀಪ ಬಂಧಿಸಿದ್ದಾರೆ.

ತಾಲೂಕಿನ ಬಿ. ಮೂಡ ಗ್ರಾಮದ ಪರ್ಲಿಯಾ ನಿವಾಸಿ ಅಮೀರ್ ಹುಸೈನ್(45) ಬಂಧಿತ ಆರೋಪಿ. ಶನಿವಾರ ಬೆಳಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದಾಗ ತುಂಬೆ ಎಂಬಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಅಮೀರ್ ಹುಸೈನ್ ಎಂಬಾತನನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ 1 ಕೆ.ಜಿ. 330 ಗ್ರಾಂ ತೂಕದ ಗಾಂಜಾ ಆತನ ಬಳಿ ಪತ್ತೆಯಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಒಟ್ಟು ವೌಲ್ಯ 39 ಸಾವಿರ ರೂ. ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಆರೋಪಿಯನ್ನು ಬಂಧಿಸಲಾಗಿದ್ದು, ಈ ಮಾದಕ ವಸ್ತುವನ್ನು ಮಂಗಳೂರು ಮೂಡುಶೆಡ್ಡೆಯ ವ್ಯಕ್ತಿಯೋರ್ವನಿಂದ ಪಡೆದಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love