ಸಾಸ್ತಾನದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಸ್ವೀಕಾರ, ಸ್ಥಳೀಯರ ಪ್ರತಿಭಟನೆ

Spread the love

ಸಾಸ್ತಾನದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಸ್ವೀಕಾರ, ಸ್ಥಳೀಯರ ಪ್ರತಿಭಟನೆ

ಕುಂದಾಪುರ: ಸಾಸ್ತಾನ ಗುಂಡ್ಮಿ ಟೋಲ್‍ಗೇಟ್‍ನಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬುಧವಾರ ಮಧ್ಯರಾತ್ರಿಯಿಂದ ಟೋಲ್ ಸ್ವೀಕಾರ ಆರಂಭಗೊಳ್ಳಲಿರುವ ಹಿನ್ನೆಲೆ, ಸಾರ್ವಜನಿಕರು ಟೋಲ್‍ಕೇಂದ್ರ ಮುಂಭಾಗ ವಾಹನಗಳನ್ನು ಅಡ್ಡವಿಟ್ಟು ಅಹೋರಾತ್ರಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಹೋರಾಟಗಾರ ಪ್ರತಾಪ್ ಶೆಟ್ಟಿ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಗೇಟ್ ಆರಂಭಕ್ಕೆ ಹೊರಟ್ಟಿದ್ದು, ಸರ್ವಿಸ್ ರಸ್ತೆಯನ್ನಾಗಲಿ ಚರಂಡಿಯನ್ನಾಗಲಿ ಮಾಡಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಅಪಘಾತ ನಡೆಯುತ್ತಿದೆ. ಆದರೂ ಜನಪ್ರತಿನಿಧಿಗಳು ಸಂಸದರು ಈ ಬಗ್ಗೆ ಕಿಂಚಿತ್ತು ಗಮನ ನೀಡಿಲ್ಲ. ನವಯುಗ ಕಂಪೆನಿ ಕೂಡ ರಸ್ತೆಯೊಂದನ್ನು ಮಾಡಿ ಸುಮ್ಮನೇ ಕುಳಿತ್ತಿದ್ದಾರೆ. ಅಗತ್ಯ ಮೂಲಬೂತ ಸೌಕರ್ಯವನ್ನು ನೀಡಿಲ್ಲ ಆದರೂ ಏಕಾಏಕಿ ಪತ್ರಿಕಾ ಪ್ರಕಟಣೆಯಲ್ಲಿ ರಾತ್ರೋರಾತ್ರಿ ಟೋಲ್ ಆರಂಭಗೊಳಿಸುತ್ತೇವೆ ಎಂದು ಹೇಳಿಕೆ ನೀಡುತ್ತಾರೆ ಎಂದು ಆರೋಪಿಸಿದರು.

ಈ ಸಂದರ್ಭ ಸ್ಥಳಕ್ಕೆ ಬಂದ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಟೋಲ್ ಸಂಗ್ರಹವನ್ನು ಇಂದು ಪತ್ರಿಕಾ ಹೇಳಿಕೆಯನ್ನು ನೀಡಿ ಏಕಾಏಕಿ ಟೋಲ್ ಸಂಗ್ರಹಕ್ಕೆ ಹೊರಟಿರುವುದು ಮತ್ತು ಸ್ಥಳೀಯರಿಗೆ ಸಂಚಾರಕ್ಕೆ ಪಾಸ್ ತೆಗೆದುಕೊಳ್ಳಿ ಎಂದು ಹೇಳಿರುವುದು ಕಾನೂನು ಬಾಹಿರ ಕನಿಷ್ಟ 15ದಿನಗಳ ಗಡುವನ್ನಾದರೂ ನೀಡಬೇಕಾಗಿತ್ತು. ಆದರೆ ಇದನ್ನು ನೀಡದೇ ಟೋಲ್ ಸಂಗ್ರಹಕ್ಕೆ ಹೊರಟಿರುವುದು ತಪ್ಪು, ನಾನು ಈ ಕುರಿತು ಎಸ್‍ಪಿಯವರೊಂದಿಗೆ ಮಾತನಾಡಿದ್ದೇನೆ. ಅವರು ಹೇಳಿದ್ದಾರೆ, ನಾವು ಟೋಲ್‍ಗೇಟ್‍ಗೆ ಬಂದೋಭಸ್ತ ನೀಡಲಾಗುವುದಿಲ್ಲ. ಏಕೆಂದರೆ ಟೋಲ್ ಸಂಗ್ರಹಕ್ಕೆ ಮುನ್ನ ಸೂಕ್ತ ಚರ್ಚೆ ಮಾಡಬೇಕಿತ್ತು. ಮತ್ತು ಟೋಲ್ ಸಂಗ್ರಹಕ್ಕೆ ಹೊರಟಿರುವ ಬಗ್ಗೆ 15ದಿನಗಳು ಮುಂಚೆ ಪತ್ರಿಕಾ ಪ್ರಕಟಣೆ ಹೊರಡಿಸಬೇಕಿತ್ತು. ಇದ್ಯಾವುದನ್ನೂ ಮಾಡದೇ ಏಕಾಏಕಿ ಪತ್ರಿಕಾಪ್ರಕಟಣೆ ನೀಡಿ ಟೋಲ್ ಸಂಗ್ರಹಕ್ಕೆ ಹೊರಟಿರುವುದರಿಂದ ನಮಗೆ ಸೂಕ್ತ ಭದ್ರತೆ ನೀಡಲಾಗುವುದಿಲ್ಲ ಎಂದಿದ್ದಾರೆ. ಈಗಾಗೆಲೇ ನಾನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಅವರು ಬೆಂಗಳೂರಿನಲ್ಲಿರುವ ಬಗ್ಗೆ ತಿಳಿಸಿದ್ದಾರೆ. ನಾಳೆ ಅವರು ಜಿಲ್ಲೆಗೆ ವಾಪಾಸಾಗುತ್ತಾರೆ. ಅವರು ಸಭೆಕರೆಯಲಿದ್ದು ಅಲ್ಲಿ ನಿಮ್ಮ ಕುಂದುಕೊರತೆಗಳನ್ನು ಚರ್ಚೆ ನಡೆಸೊಣ ಎಂದರು.

ಎಎಸ್‍ಪಿ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿದಂತೆ ಎನ್‍ಎಚ್‍ಎಐ ಟೋಲ್ ಸಂಗ್ರಹದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಚರ್ಚೆಯ ಬಳಿಕ ಟೋಲ್ ಸಂಗ್ರಹ ಆರಂಭಗೊಳ್ಳಲಿಕ್ಕಿದೆ. ಅಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಚರ್ಚಿಸಿದ ಬಳಿಕ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ ಈಗ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರು 12 ಗಂಟೆಯವರೆಗೆ ಕಾದು ಅಲ್ಲಿ ಟೋಲ್ ಸಂಗ್ರಹ ನಡೆಸುವುದಿಲ್ಲ ಎಂದು ತಿಳಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗುವುದು ಎಂದ ಎಎಸ್‍ಪಿಯವರಿಗೆ ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು.

ಪ್ರತಿಭಟನೆಯಲ್ಲಿ ಜಿ.ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್, ಹೋರಾಟ ಪ್ರಮುಖ ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಆಲ್ವಿನ್ ಅದಾಂದ್ರೆ, ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.


Spread the love