ಸಿಎಂ ವಾಚ್ ಪ್ರಕರಣ ಸಿಬಿಐಗೆ ಒಪ್ಪಿಸಲು ಮೋದಿಗೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪತ್ರ

Spread the love

ಸಿಎಂ ವಾಚ್ ಪ್ರಕರಣ ಸಿಬಿಐಗೆ ಒಪ್ಪಿಸಲು ಮೋದಿಗೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪತ್ರ

ಉಡುಪಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹ್ಯೊಬ್ಲೋಟ್ ವಾಚ್ ಪ್ರಕರಣದ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿರುವ ಶಂಕೆ ಇದ್ದು, ಸಿಬಿಐ ಮೂಲಕ ತನಿಖೆ ನಡೆಸಲು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದಾಖಲೆಗಳನ್ನು ಒದಗಿಸಲಾಗಿದೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದರು.

ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೇ ಇನ್ನಷ್ಟು ಮಹತ್ವದ ದಾಖಲೆಗಳನ್ನು ತನಿಖೆಯ ಸಂದರ್ಭ ನೀಡುತ್ತೇನೆ ಎಂದವರು ಹೇಳಿದರು.

ಮುಖ್ಯಮಂತ್ರಿಯವರು ವಾಚ್ ಉಡುಗೊರೆಯಾಗಿ ಬಂದಿದೆ ಎಂದು ಹೇಳಿಕೆ ನೀಡಿದ್ದಾರೆ. ವಾಸ್ತವದಲ್ಲಿ ಉಡುಪಿ ಸರಕಾರಿ ಆಸ್ಪತ್ರೆ ಖಾಸಗಿಗೆ ಹಸ್ತಾಂತರಕ್ಕೂ, ಈ ವಾಚ್ ಪ್ರಕರಣಕ್ಕೂ ನೇರ ಸಂಬಂಧವಿದೆ ಎಂದರು.

2016 ಮಾ.2ರಂದು ವಿಧಾನಸಭೆಗೆ ನೀಡಿರುವ ಅಫಿದವಿತ್‍ನಲ್ಲಿ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮ ನೀಡಿದ್ದು ಎಂದಿದ್ದಾರೆ. 2016ರ ಫೆಬ್ರವರಿಯಲ್ಲಿ ವಾಚ್ ಪ್ರಕರಣವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಗೊಳಿಸಿದ್ದು, ಬೆಲೆ 70 ಲಕ್ಷ ರು. ಎಂದವರು ಆರೋಪಿದ್ದಾರೆ. ಮಾ.2ರಂದು ಮುಖ್ಯಮಂತ್ರಿಗಳು ಅದರ ಬೆಲೆ 7 ಲಕ್ಷ ರು. ಎಂದು ಅಫಿದವಿತ್ ಸಲ್ಲಿಸಿದ್ದಾರೆ. ಮಾ.14ಕ್ಕೆ ಸರ್ಕಾರವೇ ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಇದು ಸಿಎಂ ಅವರನ್ನು ರಕ್ಷಿಸುವ ಷಡ್ಯಂತ್ರದ ಭಾಗ ಎಂದು ಶೆಣೈ ಆರೋಪಿಸಿದರು.

ಪ್ರಧಾನಿ ಸ್ಪಂದನೆ :ಪತ್ರವು ಪ್ರಧಾನಿಗಳ ಕಾರ್ಯದರ್ಶಿ ಅವರಿಂದ ಮಾನವ ಸಂಪನ್ಮೂಲ ಮತ್ತು ತರಬೇತಿ ಕಾರ್ಯದರ್ಶಿ ಅವರಿಗೆ ಹಸ್ತಾಂತರಿಸಲ್ಪಟ್ಟಿದೆ. ಇನ್ನು ರಾಜ್ಯ ಕಾರ್ಯದರ್ಶಿ ಅವರಿಗೆ ಬರಲಿದೆ. ತಿಂಗಳೊಳಗೆ ಪ್ರಕರಣದ ಬಗ್ಗೆ ಎಫ್.ಐ.ಆರ್. ದಾಖಲಿಸಬೇಕು. ಇಲ್ಲದಿದ್ದಲ್ಲಿ ಈ ಎಲ್ಲರ ವಿರುದ್ಧ ನ್ಯಾಯಾಲಯದಲ್ಲಿ ತಾನೇ ಮೊಕದ್ದಮೆ ದಾಖಲಿಸುತ್ತೇನೆ. ಅದಕ್ಕೆ ಮುಂದಿನ ತಿಂಗಳು ರಾಜ್ಯಪಾಲರ ಅನುಮತಿ ಕೋರಿ ಪತ್ರ ಬರೆಯಲಿನೆ ಎಂದು ಶೆಣೈ ಹೇಳಿದರು.


Spread the love