ಸಿದ್ದರಾಮಯ್ಯ– ಪೂಜಾರಿ ಮುಖಾಮುಖಿ ಯತ್ನ ವಿಫಲ

Spread the love

ಸಿದ್ದರಾಮಯ್ಯ– ಪೂಜಾರಿ ಮುಖಾಮುಖಿ ಯತ್ನ ವಿಫಲ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ನಡುವಿನ ಮುನಿಸು ಶಮನಕ್ಕೆ ಪೂಜಾರಿಯವರ ಬೆಂಬಲಿಗರು ನಡೆಸಿದ ಪ್ರಯತ್ನ ವಿಫಲವಾಯಿತು. ಭಾನುವಾರ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಯವರನ್ನು ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಕರೆತರುವ ಪ್ರಯತ್ನ ಕಡೆಗೂ ಕೈಗೂಡಲಿಲ್ಲ.

ಎತ್ತಿನಹೊಳೆ ಯೋಜನೆ, ರಾಜಕೀಯ ಬೆಳವಣಿಗೆಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಜನಾರ್ದನ ಪೂಜಾರಿಯವರು ನಿರಂತರವಾಗಿ ಮುಖ್ಯಮಂತ್ರಿಯವರ ಮೇಲೆ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಸಂಬಂಧ ಹಳಸಿದೆ. ಇದರಿಂದ ಪೇಚಿಗೆ ಸಿಲುಕಿರುವ ಪೂಜಾರಿಯವರ ಬೆಂಬಲಿಗರು ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸದ ಸಮಯವನ್ನು ಬಳಸಿಕೊಂಡು ಇಬ್ಬರು ನಾಯಕರ ಮುಖಾಮುಖಿ ಭೇಟಿಗೆ ವೇದಿಕೆ ಕಲ್ಪಿಸುವ ಸಾಹಸಕ್ಕೆ ಕೈ ಹಾಕಿದ್ದರು.

ಕೊಯಿಲದ ಪಶು ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣದ ಭೂಮಿ ಪೂಜೆಗಾಗಿ ಮುಖ್ಯಮಂತ್ರಿಯವರು ಭಾನುವಾರ ಜಿಲ್ಲಾ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮ ನಿಗದಿಯಾದ ದಿನದಿಂದಲೇ ಇಂತಹ ಪ್ರಯತ್ನಗಳು ಆರಂಭವಾಗಿದ್ದವು. ಕಾಂಗ್ರೆಸ್‌ನ ಕೆಲವು ಮುಖಂಡರೂ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದರು. ಕುದ್ರೋಳಿ ದೇವಸ್ಥಾನದ ಭೇಟಿ ಮುಖ್ಯಮಂತ್ರಿಯವರ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಇರಲಿಲ್ಲ. ಆದರೂ, ಸಿದ್ದರಾಮಯ್ಯ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ ಎಂಬ ವದಂತಿಯನ್ನು ಶನಿವಾರವೇ ಹರಿಬಿಡಲಾಗಿತ್ತು.

ಉದ್ಘಾಟನೆಗಾಗಿ ಕಾದರು: ಮುಖ್ಯಮಂತ್ರಿಯವರಿಂದ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಉದ್ಘಾಟನೆಯನ್ನು ಮಾಡಿಸಲು ಶನಿವಾರ ತೀರ್ಮಾನಿಸಲಾಗಿತ್ತು. ಭಾನುವಾರ ಸಂಜೆ 6 ಗಂಟೆಗೆ ಸಿದ್ದರಾಮಯ್ಯ ಅವರು ಅಲ್ಲಿಗೆ ಬರುತ್ತಾರೆ ಎಂಬ ಮಾಹಿತಿಯನ್ನು ಪೂಜಾರಿಯವರ ಬೆಂಬಲಿಗರು ಮಾಧ್ಯಮಗಳಿಗೆ ತಲುಪಿಸಿದ್ದರು. ಸಮಯಕ್ಕೆ ಮುನ್ನವೇ ದೇವಸ್ಥಾನಕ್ಕೆ ಬಂದಿದ್ದ ಪೂಜಾರಿಯವರು ಮುಖ್ಯಮಂತ್ರಿಯವರಿಗಾಗಿ ಕಾದು ಕುಳಿತರು.

ಕೊಯಿಲದ ಕಾರ್ಯಕ್ರಮ ಮುಗಿಸಿ ನಗರಕ್ಕೆ ವಾಪಸಾದ ಮುಖ್ಯಮಂತ್ರಿ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಐವನ್‌ ಡಿಸೋಜ ಅವರ ಮನೆಗೆ ತೆರಳಿದರು. ಅಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಇದ್ದರು. ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಯವರು ಕೆಲ ಕ್ಷಣಗಳಲ್ಲಿ ಬರುತ್ತಾರೆ ಎಂಬ ಮಾಹಿತಿಯನ್ನು ದೇವಸ್ಥಾನದಲ್ಲಿ ಸೇರಿದ್ದ ಪೂಜಾರಿಯವರ ಬೆಂಬಲಿಗರು ಹಂಚಿಕೊಳ್ಳುತ್ತಲೇ ಇದ್ದರು.

ಆದರೆ, ಸಂಜೆ 6.45ರ ಸುಮಾರಿಗೆ ಮುಖ್ಯಮಂತ್ರಿಯವರು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿದ್ದಾರೆ ಎಂಬ ಸುದ್ದಿ ಅಲ್ಲಿಗೆ ತಲುಪಿತು. ಬಳಿಕ ದೇವಸ್ಥಾನದ ಕಚೇರಿಯಿಂದ ಹೊರಬಂದ ಪೂಜಾರಿಯವರು ದಸರಾ ಉದ್ಘಾಟನೆ ವೇದಿಕೆಯತ್ತ ಹೆಜ್ಜೆ ಹಾಕಿದರು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಾರಥ್ಯ ವಹಿಸಿಕೊಂಡಿರುವ ಜನಾರ್ದನ ಪೂಜಾರಿಯವರು ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಯವರಿಗೆ ಅಧಿಕೃತವಾಗಿ ಆಹ್ವಾನವನ್ನೇ ನೀಡಿರಲಿಲ್ಲ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿಯವರು ಪೂಜಾರಿಯವರ ಬೆಂಬಲಿಗರ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಎಂದು ಗೊತ್ತಾಗಿದೆ.

‘ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡುವ ವಿಷಯವೇ ಇರಲಿಲ್ಲ. ಮುಖ್ಯ
ಮಂತ್ರಿಯವರಿಗೆ ಯಾವುದೇ ಆಹ್ವಾನವೂ ಇರಲಿಲ್ಲ’ ಎಂದು ಮುಖ್ಯಮಂತ್ರಿಯವರ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಪೆ ಪ್ರಜಾವಾಣಿ


Spread the love