ಸುಪ್ರೀಂ ಕೋರ್ಟ್‍ ನಿಂದ ಮನಪಾಕ್ಕೆ ಆದೇಶದ ಒಂದೇ ದಿನದಲ್ಲಿ “ಸಾಲಿಟೇರ್” ವಸತಿ ಸಮುಚ್ಚಯಕ್ಕೆ ಸ್ವಾಧೀನತಾ ಪತ್ರ ನೀಡಿಕೆ

Spread the love

ಸುಪ್ರೀಂಕೋರ್ಟ್‍ನಿಂದ ಮನಪಾಕ್ಕೆ ಆದೇಶದ ಒಂದೇ ದಿನದಲ್ಲಿ “ಸಾಲಿಟೇರ್” ವಸತಿ ಸಮುಚ್ಚಯಕ್ಕೆ ಸ್ವಾಧೀನತಾ ಪತ್ರ ನೀಡಿಕೆ

ಮಂಗಳೂರು : ನಗರದ ಹ್ಯಾಟ್‍ಹಿಲ್‍ನ “ಸಾಲಿಟೇರ್” ವಸತಿ ಸಮುಚ್ಚಯಕ್ಕೆ ವಿಳಂಬ ಮಾಡದೇ – ಹಿಂದಿನ ತೀರ್ಪಿಗೆ ಅನುಗುಣವಾಗಿ – ಸ್ವಾಧೀನತಾ ಪ್ರಮಾಣಪತ್ರ ನೀಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆಗೆ ಆದೇಶದ ಮೂಲಕ ದೇಶದ ಸರ್ವೋಚ್ಚ ನ್ಯಾಯಾಲಯವು ಜನತೆಗೆ ನ್ಯಾಯ ಒದಗಿಸಿದೆ. ಈ ಆದೇಶ ಬಂದ ಒಂದು ದಿನದೊಳಗೆ ಸ್ವಾಧೀನತಾ ಪತ್ರವನ್ನು ಮನಪಾ ನೀಡಿದೆ.

ದಿನಾಂಕ 19-07-2019 ರಂದು ಸರ್ವೋಚ್ಚ ನ್ಯಾಯಾಲಯವು ಕಾನೂನು ಪ್ರಕಾರವಾಗಿ, ತತ್‍ಕ್ಷಣವೇ ಪ್ರವರ್ತಕರಾದ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವೆಲಪ್ಪರ್ಸ್‍ಗೆ ಪ್ರಮಾಣಪತ್ರ ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ, ಈ ಬಗ್ಗೆ ಪಾಲಿಕೆಯ ವಿಳಂಬ ನೀತಿಯಿಂದಾಗಿ ಕಟ್ಟಡದ ಸಮುಚ್ಚಯಗಳ ಮಾಲಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಬಿಲ್ಡರ್ ಕಡೆಯಿಂದ ಎಲ್ಲಾ ಕಾನೂನುಗಳ ಪಾಲನೆಯಾಗಿದ್ದು, ಸುಪ್ರೀಂ ಕೋರ್ಟ್‍ನ ತೀರ್ಪಿನ ಹೊರತಾಗಿಯೂ ಪಾಲಿಕೆಯು ನಾಲ್ಕು ತಿಂಗಳಿನಿಂದ ಪ್ರಮಾಣ ಪತ್ರ ನೀಡಿರಲಿಲ್ಲ. ನ್ಯಾಯಾಲಯದ ಆದೇಶ ಪಾಲಿಸಿ ಅಗ್ನಿಶಾಮಕ ದಳದವರು ಕೂಡಾ ಅನುಮತಿ ನೀಡಿದ್ದರು. ಈ ಪಾಲಿಕೆಯ ವಿಳಂಬದಿಂದಾಗಿ ಫ್ಲ್ಯಾಟ್‍ಗಳ ಮಾಲಕರು ಅನಗತ್ಯ ತೊಂದರೆಗೀಡಾದರು. ಬ್ಯಾಂಕ್ ಮುಂಗಡದ ಕಂತು ಪಾವತಿಸುತ್ತಾ ಬಾಡಿಗೆ ಮನೆಯಲ್ಲೇ ಅವರು ಇರಬೇಕಾಗಿತ್ತು. ತೆರಿಗೆ ರಿಯಾಯಿತಿಯೂ ಕೆಲವರಿಗೆ ದೊರೆಯದಂತಾಯಿತು. ರೆರಾ ಪೂರ್ಣತಾಪತ್ರ ಪಡೆಯಲು ಈ ಡಿಸೆಂಬರ್ ಮೊದಲ ವಾರ ಕೊನೆಯ ಗಡುವಾಗಿತ್ತು. ಈ ಕಾರಣದಿಂದ ಮತ್ತು ಫ್ಲ್ಯಾಟ್‍ಗಳ ಮಾಲಕರ ಹಿತಾಸಕ್ತಿ ರಕ್ಷಣೆಗೆ ಬಿಲ್ಡರ್ ಸಂಸ್ಥೆಯು ಸುಪ್ರೀಂ ಕೋರ್ಟಿಗೆ ಮೊರೆ ಹೋಗುವುದು ಅನಿವಾರ್ಯವಾಗಿತ್ತು.

ಬಿಲ್ಡರ್ ಸಂಸ್ಥೆಯ ಮನವಿ ಆಲಿಸಿದ ನ್ಯಾಯಾಲಯವು ಪಾಲಿಕೆಯನ್ನು ಪ್ರಮಾಣಪತ್ರ ಏಕೆ ವಿತರಿಸಿಲ್ಲ ಮತ್ತು ವಿತರಣೆಯಾಗುವುದೇ-ಇಲ್ಲವೇ ಎಂದು ಪ್ರಶ್ನಿಸಿತು. ಪಾಲಿಕೆಯ ಪರ ನ್ಯಾಯವಾದಿಗಳು ನ್ಯಾಯಾಲಯದ ಆಜ್ಞೆಯನ್ನು ಪಾಲಿಸುವುದಾಗಿ ಹೇಳಿದರು. ಅವರು ದಿನಾಂಕ 29-11-2019 ರಂದು ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಬಳಿಕ ಬಿಲ್ಡರ್‍ಗೆ ಹಸ್ತಾಂತರಿಸಲಾಯಿತು. “ನನಗೆ ಮತ್ತು ನನ್ನ ಗ್ರಾಹಕರಿಗೆ ನ್ಯಾಯ ಒದಗಿಸಿದ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಕೃತಜ್ಞನಾಗಿದ್ದೇನೆ,” ಎಂದು ಲ್ಯಾಂಡ್‍ಟ್ರೇಡ್ಸ್ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಹೇಳಿದ್ದಾರೆ. ಪಿಐಎಲ್‍ನಂತ ವ್ಯವಸ್ಥೆಯು ನಾಗರಿಕರ ಹಿತರಕ್ಷಣೆಗಾಗಿ ಇದೆ. ಖಾಸಗಿ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವೆ ವ್ಯತ್ಯಾಸವಿದೆ. ಕಾನೂನುಬಾಹಿರ ಲಾಭಕ್ಕಾಗಿ ಪಿಐಎಲ್ ದುರ್ಬಳಕ್ಕೆ ಸಲ್ಲವೆಂದು ನ್ಯಾಯಾಲಯ ತೋರ್ಪಡಿಸಿದೆ. ನ್ಯಾಯಾಂಗದ ಮೇಲಿನ ತನ್ನ ನಂಬಿಕೆ ಮತ್ತಷ್ಟು ಧೃಡವಾಗಿದೆ ಎಂದಿದ್ದಾರೆ.


Spread the love