ಸುಬ್ರಹ್ಮಣ್ಯ: ಶಿರಾಡಿ ಘಾಟ್ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ: 15ರಂದು ಪ್ರತಿಭಟನೆ

Spread the love

ಸುಬ್ರಹ್ಮಣ್ಯ:  ಮಲೆನಾಡು ಜನಹಿತಾ ರಕ್ಷಣಾ ವೇದಿಕೆ ಹಾಗೂ ಸಕಲೇಶಪುರದ ‘ಶಿರಾಡಿ ಘಾಟ್ ಉಳಿಸಿ’ ಸಮಿತಿ ವತಿ­ಯಿಂದ ಶಿರಾಡಿ ಘಾಟ್ ಕಾಮಗಾರಿ ವಿಳಂಬ ವಿರುದ್ಧ  ಪ್ರತಿಭಟನೆ ಇದೇ 15 ರಂದು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದ್ದಾರೆ.

2 ಕಡೆಗಳಲ್ಲಿ ಹೆದ್ದಾರಿಗೆ ಕಾಮಗಾರಿ ನಡೆಯುವ ಸಂದರ್ಭ ಹಾಕಲಾದ ಗೇಟನ್ನು ಬಲವಂತವಾಗಿ ತೆರವು­ಗೊಳಿಸುವ ಮೂಲಕ ಪ್ರತಿಭಟನೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಸುಬ್ರಹ್ಮಣ್ಯದಲ್ಲಿ  ಪತ್ರಿಕಾ­ಗೊಷ್ಠಿಯಲ್ಲಿ ಮಾತನಾಡಿದ ಅವರು ಕಾಮಾಗಾರಿಗೆಂದು ವರ್ಷ­ಪೂರ್ತಿ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಬಂದ್ ಗೊಳಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಶಿರಾಡಿ ಹೆದ್ದಾರಿ ಕಾಮ­ಗಾರಿಯು ಆರಂಭದಿಂದಲೂ ಆಮೆಗತಿ­ಯಲ್ಲಿ ನಡೆಯುತ್ತಾ ಬಂದಿದೆ.

ಪ್ರಥಮ ಹಂತದ ಕಾಮಗಾರಿಯ ಕೆಲಸ ಆರಂಭ­ಗೊಂಡು ಆರು ತಿಂಗಳು ಕಳೆದಿವೆ. ಇನ್ನೂ ಕಾಮಗಾರಿ ಪೂರ್ಣ­ಗೊಳಿಸಿಲ್ಲ. ಹೆದ್ದಾರಿ ರಸ್ತೆಯನ್ನು ಸುದೀರ್ಘ ಕಾಲ ಬಂದ್ ಮಾಡಿದ್ದರಿಂದ ದಕ್ಷಿಣ ಕನ್ನಡ ಮತ್ತು ಹಾಸನ ಈ ಎರಡು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಒಳಗಾಗಿ­ದ್ದಾರೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ­ಯಾಗಿದೆ. ಹೋಟೆಲ್‌, ಅಂಗಡಿ, ಚಿಲ್ಲರೆ ವ್ಯಾಪಾರಸ್ಥರು ಸಂಕಷ್ಟ­ಕ್ಕೀಡಾಗಿದ್ದಾರೆ ಎಂದು ತಿಳಿಸಿದರು.

ಮೇ 30 ಕ್ಕೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಜಿಲ್ಲಾಧಿ­ಕಾರಿಗಳು ಹೇಳಿದ್ದರು. ಬಳಿಕ ಪತ್ರಿಕೆಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಜಿಲ್ಲೆಯ ಜನತೆಯ ಜೀವನದ ಜೊತೆ ಚೆಲ್ಲಾಟ ಆಡುತಿದ್ದಾರೆ. ಮಳೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಇದೀಗ ಸಬೂಬು ಹೇಳಿ ಗೊಂದಲ ಮೂಡಿ­ಸುತ್ತಿದ್ದಾರೆ.  ರಸ್ತೆಯನ್ನು ಬಲವಂತವಾಗಿ ತೆಗೆದು ಸಂಚಾರಕ್ಕೆ ಮುಕ್ತಗೊಳಿಸುವು­ದೊಂದೆ ನಮಗಿರುವ ದಾರಿ.

ಆದ್ದರಿಂದ ಗುಂಡ್ಯದಲ್ಲಿ ರಸ್ತೆಗೆ ಹಾಕಲಾದ ಗೇಟನ್ನು ಬಲವಂತವಾಗಿ ತೆರವುಗೊಳಿಸುವ ಮೂಲಕ ಆರಂಭಿಸಿ ಬಳಿಕ ಅಲ್ಲಿಂದ ಈ ಹೆದ್ದಾರಿ ರಸ್ತೆಯಾಗಿ ಪ್ರಯಾಣ ಬೆಳೆಸಿ ಸಕಲೇಶಪುರಕ್ಕೆ ತೆರಳಿ ಅಲ್ಲಿ ಸಕಲೇಶಪುರ ತಾಲ್ಲೂಕಿನ ಜನತೆಯ ಜೊತೆ ಸೇರಿ ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ ಕೂಜುಗೋಡು, ಜಯರಾಮ ಕಟ್ಟೆಮನೆ, ಜಯಪ್ರಕಾಶ ಮುಳುಗಾಡು,ಸನತ್ ಕೈಕಂಬ ಉಪಸ್ಥಿತರಿದ್ದರು.


Spread the love