ಸುರತ್ಕಲ್: ರಸ್ತೆ ದಾಟುತ್ತಿದ್ದ ಶಾಲಾ ಬಾಲಕ ಸ್ಕೂಲ್ ಬಸ್ಸಿನಡಿ ಬಿದ್ದು ಗಾಯ

Spread the love

ಸುರತ್ಕಲ್: ರಸ್ತೆ ದಾಟುತ್ತಿದ್ದ ಶಾಲಾ ಬಾಲಕ ಸ್ಕೂಲ್ ಬಸ್ಸಿನಡಿ ಬಿದ್ದು ಗಾಯ

ಸುರತ್ಕಲ್ : ಶಾಲಾ ಬಸ್ಸಿನಿಂದ ಇಳಿದು ರಸ್ತೆ ದಾಟಲು ಮುಂದಾದ ವಿದ್ಯಾರ್ಥಿಯೋರ್ವ ಅದೇ ಬಸ್ಸಿನಡಿಗೆ ಬಿದ್ದ ಘಟನೆ ಸುರತ್ಕಲ್ ನ ಕುಳಾಯಿ ಎಂಬಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಪಘಾತದಲ್ಲಿ ಬಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸುರತ್ಕಲ್ ಬಳಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಬಸ್ ಎಂದಿನಂತೆ ಬುಧವಾರ ವಿದ್ಯಾರ್ಥಿಗಳನ್ನು ಕರೆತಂದಿತ್ತು. ಮನೆ ಮುಂದೆ ವಿದ್ಯಾರ್ಥಿಯೋರ್ವನನ್ನು ಇಳಿಸಿದೆ. ಬಸ್ಸಿನಿಂದ ಇಳಿದ ವಿದ್ಯಾರ್ಥಿ ಬಸ್ ಮುಂಭಾಗದಿಂದಲೇ ರಸ್ತೆ ದಾಟಿದ್ದು, ಇದನ್ನು ಗಮನಿಸದ ಬಸ್ ಚಾಲಕ ಬಸ್ ಮುಂದಕ್ಕೆ ಚಲಾಯಿಸಿದಾಗ ಬಾಲಕ ಬಸ್ ನ ಅಡಿಗೆ ಬಿದ್ದಿದ್ದಾನೆ. ತಕ್ಷಣ ಅಲ್ಲೇ ಇದ್ದ ಮತ್ತೋರ್ವ ವಿದ್ಯಾರ್ಥಿ ಬೊಬ್ಬೆಹೊಡೆದ ಪರಿಣಾಮ ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ. ಅದೃಷ್ಟವಶಾತ್ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಬಸ್ ಚಾಲಕನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.


Spread the love