ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪ: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗೆ ಗುಂಡೇಟು ಘಟನೆಗೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಖರೀದಿ ಮಾಡಿರುವ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದಾಖಲೆಗಳ ಬಗ್ಗೆ ವಿಚಾರಿಸಿದಾಗ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ದೃಢೀಕರಿಸಿದಂತೆ ಶುಕ್ರವಾರದಂದು ಮಾತ್ರ ಜಾನುವಾರು ಸಂತೆ ನಡೆಯುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದಾಖಲೆಗಳು ಅಂದರೆ ರಶೀದಿ ಕ್ರ.ಸಂ: 27653 ಹಾಗೂ 27654ನ್ನು ತಿದ್ದಿ ಸುಳ್ಳು ಸೃಷ್ಟಿಸಿ ಹರಿದಾಡಿಸಿರುವುದು ಕಂಡು ಬಂದಿದೆ. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿ ಆರ್ಟಿಒ ಮತ್ತು ಪಶು ವೈದ್ಯಾಧಿಕಾರಿಯಿಂದ ಪಡೆದ ಮಾಹಿತಿಯಂತೆ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲು ಅನುಮತಿ ನೀಡಿಲ್ಲವೆಂದು ತಿಳಿಸಲಾಗಿದೆ. ಹಾಗಾಗಿ ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳನ್ನು ರಕ್ಷಿಸುವ ದುರುಧ್ಧೇಶದಿಂದ State office SDPI Karnataka ಎಂಬ ಹೆಸರಿನ ಖಾತೆಯ ಖಾತೆದಾರರು, ವೆಬ್ ಒಂದರ ಮಾಲಕ/ಸಂಪಾದಕ ಮತ್ತು ಸಾದತ್ ಬಜತ್ತೂರು ಮತ್ತಿತರರು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವ ಮೂಲಕ ಸಾರ್ವಜನಿಕರು ಗುಂಪುಕೂಡಿ ದೊಂಬಿಯಂತಹ ಅಪರಾಧ ನಡೆಸಲು ಸನ್ನಿವೇಶ ಸೃಷ್ಟಿಸಿರುತ್ತಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 123-2025, ಕಲಂ: 233,240,338,353(1) (b), 192, 61(2)(b),238(ಛಿ),ಡಿ/ತಿ3(5)ಭಾರತೀಯ ನ್ಯಾಯ ಸಂಹಿತೆ 2023ರಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಾಕಾರಿ ಪೋಸ್ಟ್ ಪ್ರಸಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗಾಗಿ ಸಾಮಾಜಿಕ ಜಾಲತಾಣದ ಬಳಕೆದಾರರು ಎಚ್ಚರಿಕೆ ವಹಿಸುವಂತೆ ಎಸ್ಪಿ ಸೂಚಿಸಿದ್ದಾರೆ.













