ಸೆಕ್ಷನ್ ನಡುವೆಯೂ ಸಾಸ್ತಾನದಲ್ಲಿ ಟೋಲ್ ವಿರುದ್ದ ಭಾರಿ ಪ್ರತಿಭಟನೆ, ಬಂಧನ

ಸೆಕ್ಷನ್ ನಡುವೆಯೂ ಸಾಸ್ತಾನದಲ್ಲಿ ಟೋಲ್ ವಿರುದ್ದ ಭಾರಿ ಪ್ರತಿಭಟನೆ, ಬಂಧನ
ಉಡುಪಿ: ಸಾಸ್ತಾನ ಗುಂಡ್ಮಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ಮತ್ತು ಇನ್ನಿತರ ಬೇಡಿಕೆಗೆ ಬೆಲೆ ನೀಡದೆ ಟೋಲ್ ಆರಂಭಿಸಿರುವುದನ್ನು ಖಂಡಿಸಿ ಶನಿವಾರದಂದು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಟೋಲ್‌ಗೇಟ್ ಆಸುಪಾಸಿನ ೪ ಕಿಮೀ ವರೆಗೆ 144  ಸೆಕ್ಷನ್ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೂಡ ಪ್ರತಿಭಟನಕಾರರು ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲು ಹೊರಟಾಗ ಸಾಸ್ತಾನ ಪೇಟೆಯಲ್ಲಿಯೇ ಪೊಲೀಸ್‌ರು ಕಾರ್ಯಾಚರಣೆ ನಡೆಸಿ ಪ್ರತಿಭಟನಾಕಾರರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡರು.

ಫೆಬ್ರವರಿ 9 ರ ಗುರುವಾರದಂದು ಮಧ್ಯರಾತ್ರಿಯಿಂದ ಟೋಲ್ ಸಂಗ್ರಹಣೆ ಆರಂಭವಾದ ಹಿನ್ನಲೆಯಲ್ಲಿ ಗುರುವಾರ ಮುಂಜಾನೆಯಿಂದಲೇ ಟೋಲ್‌ಕೇಂದ್ರಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಶುಕ್ರವಾರದಂದು ಪತ್ರಿಕಾಗೋಷ್ಠಿ ನಡೆಸಿದ ಹೆದ್ದಾರಿ ಜಾಗೃತಿ ಸಮಿತಿ ಶನಿವಾರದಂದು ಮುಂಜಾನೆ 10 ಕ್ಕೆ ಪ್ರತಿಭಟನೆ ನಡೆಸುವ ಕುರಿತು ಹೇಳಿಕೆ ನೀಡಿತ್ತು. ಪ್ರತಿಭಟನೆಯ ಬಗ್ಗೆ ಪತ್ರಿಕಾ ಹೇಳಿಕೆಗಳು ಬರುತ್ತಿದ್ದ ಕಾರಣ ಶುಕ್ರವಾರ ಸಂಜೆ 6ಗಂಟೆಯಿಂದ ಟೋಲ್‌ಗೇಟ್ ಸುತ್ತಮುತ್ತಲಿನ 2 ಕಿಮೀ ವರೆಗೆ 144 ಸೆಕ್ಷನ್ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ವಿಧಿಸಿದ್ದರು. ಕಳೆದ ಎರಡು ದಿನಗಳಿಂದ ಸುಮಾರು ೪೦೦ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಟೋಲ್‌ಗೇಟ್‌ಗೆ ಸರ್ಪಗಾವಲು ನೀಡಿದ್ದರು.

ಶನಿವಾರದಂದು ಬೆಳಿಗ್ಗೆ ಮತ್ತೆ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ ಹೆದ್ದಾರಿ ಜಾಗೃತಿ ಸಮಿತಿ ಮತ್ತು ವಿವಿಧ ಸಂಘಟನೆಯವರು ಹಾಗೂ ಸಾರ್ವಜನಿಕರು 144 ಸೆಕ್ಷನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಪ್ರತಿಭಟನೆ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಅಚ್ಚುತ ಪೂಜಾರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ್ ಕುಂದರ್, ಹೋರಾಟ ಸಮಿತಿಯ ಅಲ್ವಿನ್ ಅಂದಾದ್ರೆ, ಸ್ಥಳಿಯ ಪಂಚಾಯಿತಿ ಅಧ್ಯಕ್ಷರಾದ ಗೋವಿಂದ ಪೂಜಾರಿ, ಮೋಸೆಸ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

 ಸಭೆ ನಡೆಸಿದ ಬಳಿಕ ಪ್ರತಿಭಟನಾಕಾರರು ಕಾಲ್ನಡಿಗೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಂದು ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಲು ಮುಂದಾದರು. ಸಾಸ್ತಾನ ಮುಖ್ಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಪ್ರತಿಭಟನಾಕಾರನ್ನು ಬಂಧಿಸಲು ಪೊಲೀಸ್‌ರು ಸಿದ್ಧವಾದ ಹಿನ್ನಲೆ ಪ್ರತಿಭಟನಾಕಾರರು ಹೆದ್ದಾರಿಯಲ್ಲಿಯೇ ಕುಳಿತು ಜಿಲ್ಲಾಡಳಿತ ಮತ್ತು ಟೋಲ್ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಉಡುಪಿ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ನೇತೃತ್ವದ ಪೊಲೀಸ್ ತಂಡ ಪ್ರತಿಭಟನಾಕಾರರನ್ನು ಬಂಧಿಸಿ ರಾಜ್ಯ ಸಾರಿಗೆಯ ಬಸ್‌ಗಳ ಮೂಲಕ ಸಾಗಿಸಿದರು. ಈ ಸಂದರ್ಭ ಬಹು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನು ಸುಮಾರು 4 ಬಸ್‌ಗಳಲ್ಲಿ ಬಂಧಿಸಿ ಸಾಗಿಸಲಾಯಿತು.

Notify of
Roshan

Navayuga road construction which dey owned,paying of toll asper their opinion correct.but here some question s r created .their solution,answer, who vl b responsible??1st solve the problems n dey collect toll.datsall.