ಸೆಪ್ಟೆಂಬರ್ 2; ದ.ಕ. ಜಿಲ್ಲೆಯಾದ್ಯಂತ ಬೀದಿಬದಿ ವ್ಯಾಪಾರ ಬಂದ್

Spread the love

ಸೆಪ್ಟೆಂಬರ್ 2; ದ.ಕ. ಜಿಲ್ಲೆಯಾದ್ಯಂತ ಬೀದಿಬದಿ ವ್ಯಾಪಾರ ಬಂದ್

ಮಂಗಳೂರು: ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರಹೂಡಿಕೆಯನ್ನು ವಿರೋಧಿಸಿ, ಬೀದಿಬದಿ ವ್ಯಾಪಾರಸ್ಥರಿಗಾಗಿ ರಾಜ್ಯ ಸರಕಾರವು ವಿಶೇಷ ನಿಯಾಮಾವಳಿ ರೂಪಿಸಲು ಒತ್ತಾಯಿಸಿ, ಗುರುತುಚೀಟಿ, BPL ರೇಷನ್ ಕಾರ್ಡ್ ನಿವೇಶನ, ಬೀದಿಬದಿ ವ್ಯಾಪಾಸ್ಥರಿಗಾಗಿ ಆರೋಗ್ಯವಿಮೆ, ಸಾಲ ಸೌಲಭ್ಯ ಸೇರಿದಂತೆ ಪರ್ಯಾಯ ವ್ಯವಸ್ಥೆಗಾಗಿ ಆಗ್ರಹಿಸಿ, ಕಾರ್ಮಿಕ ವರ್ಗದ ಅಖಿಲ ಭಾರತ ಮಹಾಮುಷ್ಕರವನ್ನು ಬೆಂಬಲಿಸಿ ಸೆಪ್ಟೆಂಬರ್ 2ರಂದು ದ.ಕ. ಜಿಲ್ಲೆಯಾದ್ಯಂತ ಬೀದಿಬದಿ ವ್ಯಾಪಾರ ಬಂದ್ ನಡೆಯಲಿದೆ ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬೀದಿಬದಿ ವ್ಯಾಪಾರ ನಾಗರೀಕ ಸಮಾಜದ ಅವಿಭಾಜ್ಯ ಅಂಗ. ಒಂದು ಕಡೆ ಬೀದಿಬದಿ ವ್ಯಾಪಾರಸ್ಥರ ಉತ್ತಮ ಬದುಕಿಗಾಗಿ ದೇಶದ ಸಂಸತ್ತಿನಲ್ಲಿ ಮಸೂದೆಯೊಂದು ಅಂಗೀಕಾರಗೊಂಡರೆ, ಮತ್ತೊಂದು ಕಡೆಯಲ್ಲಿ ಕೇಂದ್ರ ಸರ್ಕಾರವು ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರಹೂಡಿಕೆಯನ್ನು ಮಾಡುವ ಮೂಲಕ ವರ್ತಕರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರ ಬದುಕಿಗೆ ಕೊಡಲಿಪಟ್ಟನ್ನು ನೀಡಿದೆ. ಬಹುರಾಷ್ಟ್ರೀಯ ಕಂಪೆನಿಗಳು ಚಿಲ್ಲರೆ ವ್ಯಾಪಾರದಲ್ಲೂ ಹಸ್ತಕ್ಷೇಪ ಮಾಡುವ ಮೂಲಕ ಕೋಟ್ಯಾಂತರ ಸಂಖ್ಯೆಯ ವರ್ತಕರು ಹಾಗೂ ಬೀದಿಬದಿ ವ್ಯಾಪಾರಸ್ಥರು ಬೀದಿ ಪಾಲಾಗಿದ್ದಾರೆ.

ಇಡೀ ದೇಶದಲ್ಲಿ ಮಸೂದೆಗೊಂಡು ಜಾರಿಗೊಂಡರೂ, ಅದರ ಆಧಾರದಲ್ಲಿ ರಾಜ್ಯ ಸರ್ಕಾರಗಳು ವಿಶೇಷ ನಿಯಾಮಾವಳಿಯನ್ನು ರೂಪಿಸಬೇಕಾಗಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಈ ಬಗ್ಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಸ್ಥಳೀಯಾಡಳಿತಗಳು ಟೌನ್‍ವೆಂಡಿಂಗ್ ಕಮಿಟಿಯನ್ನು ರಚಿಸಬೇಕೆಂದಿದ್ದರೂ ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಇನ್ನೂ ರಚಿಸಿಲ್ಲ. ಬೀದಿಬದಿ ವ್ಯಾಪಾರಸ್ಥರು ತೀರಾ ಬಡವರೆಂದೇ ಕೇಂದ್ರ ಸರಕಾರವು ಪರಿಗಣಿಸಿರುವಾಗ, ಅವರಿಗೆ BPL ರೇಷನ್ ಕಾರ್ಡ್, ಉಚಿತ ಮನೆ ನಿವೇಶನ, ಗುರುತುಚೀಟಿ, ಆರೋಗ್ಯ ವಿಮೆ, ಸಾಲ ಸೌಲಭ್ಯ ಸೇರಿದಂತೆ ವಿವಿಧ ರೀತಿಯ ಸವಲತ್ತುಗಳನು ನೀಡಬೇಕಾಗಿದೆ. ಆದರೆ ಕೇಂದ್ರ ಸರಕಾರವು ಈ ಬಗ್ಗೆ ದಿಟ್ಟ ಮೌನ ವಹಿಸಿದೆ.

ಇಂತಹ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಕೇಂದ್ರ ಸರಕಾರದ ವಿರುದ್ಧ ಹಾಗೂ ಕಾರ್ಮಿಕ ವರ್ಗದ ನೇತೃತ್ವದಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಹಾಮುಷ್ಕರವನ್ನು ಬೆಂಬಲಿಸಿ ಸೆಪ್ಟೆಂಬರ್ 2ರಂದು ದ.ಕ. ಜಿಲ್ಲೆಯಾದ್ಯಂತ ಬೀದಿಬದಿ ವ್ಯಾಪಾರ ಬಂದ್ ನಡೆಯಲಿದೆ. ದುಡಿಯುವ ವರ್ಗ ಈ ನ್ಯಾಯಯುತ ಮುಷ್ಕರದಲ್ಲಿ ಬೀದಿಬದಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಭಾಗವಹಿಸುವ ಮೂಲಕ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಗೌರವಾಧ್ಯಕ್ಷರಾದ ಸುನೀಲ್‍ಕುಮಾರ್ ಬಜಾಲ್, ಅಧ್ಯಕ್ಷರಾದ ಮಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್.ರವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love