ಸೆ.22: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಪ್ರೇರಣ ಪ್ರಶಸ್ತಿ ಪ್ರದಾನ

Spread the love

ಸೆ.22: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಪ್ರೇರಣ ಪ್ರಶಸ್ತಿ ಪ್ರದಾನ

ಉಡುಪಿ: 2012ರಲ್ಲಿ ಪ್ರಾರಂಭಗೊಂಡ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿನ 12ನೇ ವಾರ್ಷಿಕ ಸಹ ಮಿಲನ ಹಾಗೂ 2024ನೇ ಸಾಲಿನ ಪ್ರೇರಣ ಪ್ರಶಸ್ತಿ ಪ್ರದಾನ ಸಮಾರಂಭ ಸೆ.22ರಂದು ಸಂಜೆ ಕಡಿಯಾಳಿಯಲ್ಲಿರುವ ಮಾಂಡವಿ ಸಭಾಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸಂತೋಷ್ ಡಿಸಿಲ್ವ ಹಾಗೂ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಕೋಣಿಯ ಉದ್ಯಮಿ ಪಿಲಿಫ್ ಡಿಕೊಸ್ಟಾ ಅವರನ್ನು ವರ್ಷದ ಉದ್ಯಮಿ ಪ್ರಶಸ್ತಿಗೆ, ಮಣಿಪಾಲದ ತನುಜಾ ಮಾಬೆನ್‌ರನ್ನು ವರ್ಷದ ಮಹಿಳಾ ವೃತ್ತಿ ನಿರತ ಪ್ರಶಸ್ತಿಗೆ, ನಕ್ರೆ ಕಾರ್ಕಳದ ಡೆನೋಲ್ಡ್ ಜೆಸೆನ್ ಸಿಕ್ವೇರಾ ಅವರನ್ನು ವರ್ಷದ ಯುವ ಉದ್ಯಮಿ ಪ್ರಶಸ್ತಿಗೆ ಹಾಗೂ ಉಡುಪಿ ಕುತ್ಪಾಡಿ ಗ್ರಾಮದ ಜೂಲಿಯನ್ ದಾಂತಿ ಅವರನ್ನು ವರ್ಷದ ಪ್ರಗತಿಪರ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರಿಗೆ 22ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಕರ್ನಾಟಕ ಕ್ರೈಸ್ತ ಸಂಘಗಳ ಅಂತರ್‌ರಾಷ್ಟ್ರೀಯ ಒಕ್ಕೂಟ (ಇಫ್ಕಾ)ದ ಸ್ಥಾಪಕಾಧ್ಯಕ್ಷರಾಗಿದ್ದ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕುಲಾಸೊ ಅವರ ಕನಸಿನ ಕೂಸಾಗಿ ಕ್ರಿಶ್ಚಿಯನ್ ಚೇಂಬರ್ ಆಪ್ ಕಾಮರ್ಸ್ ಪ್ರಾರಂಭ ಗೊಂಡಿದ್ದು, ಉದ್ಯಮಿ ಡಾ.ಜೆರ್ರಿ ವಿನ್ಸೆಂಟ್ ಡಾಯಸ್ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ಆಲ್ವಿನ್ ಕ್ವಾಡ್ರಸ್ ತಿಳಿಸಿದರು.

ಈ ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿಯ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಗಳಿಗೆ ವಿಸ್ತರಿಸಿ ದ್ದರೂ, ಸದ್ಯಕ್ಕೆ ಇದನ್ನು ಉಡುಪಿ ಜಿಲ್ಲೆಗೆ ಸೀಮಿತಗೊಳಿಸಿದ್ದೇವೆ. ಕ್ರೈಸ್ತ ಸಮಾಜದ ಎಲ್ಲ ವರ್ಗಗಳನ್ನು -ಕೆಥೋಲಿಕ್, ಪ್ರೊಟೆಸ್ಟಂಟ್, ಸೀರಿಯನ್, ಒರ್ತೊಡೊಕ್ ಹಾಗೂ ಇತರ- ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ವೃತ್ತಿ ಪರರು ಹಾಗೂ ಕೃಷಿಕರು ಇದರ ಸದಸ್ಯರಾಗಿದ್ದಾರೆ. ಕೇವಲ 30 ಮಂದಿ ಸದಸ್ಯರೊಂದಿಗೆ ಪ್ರಾರಂಭಗೊಂಡ ಈ ಸಂಸ್ಥೆ ಇಂದು 150 ಮಂದಿ ಸದಸ್ಯರನ್ನು ಒಳಗೊಂಡಿದೆ ಎಂದವರು ತಿಳಿಸಿದರು.

ಕಳೆದ 11 ವರ್ಷಗಳಲ್ಲಿ ಸಂಸ್ಥೆ ತನ್ನ ಸದಸ್ಯರಿಗೆ ಉದ್ಯಮಶೀಲತಾ ಶಿಬಿರ, ಕಾರ್ಯಾಗಾರಗಳು ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ಜಿಎಸ್‌ಟಿ, ಆದಾಯ ತೆರಿಗೆ, ಕೇಂದ್ರ ಹಾಗೂ ರಾಜ್ಯದ ಬಜೆಟ್ ವಿಚಾರವಿನಿಮಯ ಹಾಗೂ ಕಾನೂನು ಮಾಹಿತಿಗಳ ಶಿಬಿರಗಳನ್ನು ನಡೆಸುತ್ತಾ ಬಂದಿದೆ ಎಂದು ಸಂತೋಷ್ ಡಿಸಿಲ್ವ ವಿವರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಸೆ.22ರ ಸಂಜೆ 5:00ಗಂಟೆಗೆ ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಕಾರವಾರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾರ್ಜ್ ಫೆರ್ನಾಂಡೀಸ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಭಾಗವಹಿಸುವರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಡಾ.ಜೆರ್ರಿ ವಿನ್ಸೆಂಟ್ ಡಯಾಸ್, ನಿರ್ದೇಶಕರಾದ ಲೂಯಿಸ್ ಲೋಬೊ, ವಿಲ್ಸನ್ ಡಿಸೋಜ, ವಾಲ್ಟರ್ ಸಲ್ಡಾನ, ಕುಂದಾಪುರದ ಜೀವನ್ ಸಾಲಿನ್ಸ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments