ಸೈಂಟ್ ಮೇರಿಸ್ ದ್ವೀಪದಲ್ಲಿ ತೇಲುವ ಜೆಟ್ಟಿ ನಿರ್ಮಾಣ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

Spread the love

ಸೈಂಟ್ ಮೇರಿಸ್ ದ್ವೀಪದಲ್ಲಿ ತೇಲುವ ಜೆಟ್ಟಿ ನಿರ್ಮಾಣ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಉಡುಪಿ: ಮಲ್ಪೆಯಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ, ದ್ವೀಪದಲ್ಲಿ ಇಳಿಯಲು ಅನುಕೂಲವಾಗುವಂತೆ 2.26 ಕೋಟಿ ರೂ ವೆಚ್ಚದಲ್ಲಿ ಸಮುದ್ರದಲ್ಲಿ ಪ್ಲೋಟಿಂಗ್ (ತೇಲುವ) ಜೆಟ್ಟಿ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , ಜಿಲ್ಲಾ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಮಲ್ಪೆ ಜೆಟ್ಟಿಯಿಂದ ಹೊರಡುವ ದೊಡ್ಡ ಬೋಟ್ ನಲ್ಲಿ ಸೈಂಟ್ ಮೇರಿಸ್ ದ್ವೀಪದಿಂದ ಸುಮಾರು 150 ಮೀ ಹಿಂದೆಯೇ, ದೊಡ್ಡ ಬೋಟ್ ನಿಂದ ಸಣ್ಣ ದೋಣಿಗಳಿಗೆ ಪ್ರಯಾಣಿಕರನ್ನು ಇಳಿಸಿ ದ್ವೀಪ ತಲುಪಿಸಲಾಗುತ್ತಿದೆ, ಮಕ್ಕಳು , ವೃದ್ದರೂ ಸೇರಿದಂತೆ ಪ್ರಯಾಣಿಕರಿಗೆ ಸಮುದ್ರ ಮಧ್ಯೆ ಹೀಗೆ ಬೋಟ್ ಗಳ ಮಧ್ಯೆ ಬದಲಾಯಿಸುವುದು ಅಪಾಯಕಾರಿಯಾಗಿದ್ದು, ಈ ನಿಟ್ಟಿನಲ್ಲಿ ದ್ವೀಪದ ಬಳಿ , 2.26 ಕೋಟಿ ಅಂದಾಜು ವೆಚ್ಚದಲ್ಲಿ ಪ್ಲೋಟಿಂಗ್ ಜೆಟ್ಟಿ ನಿರ್ಮಿಸಲು ಪ್ರಸ್ತಾವನೆ ತಯಾರಿಸಲಾಗಿದೆ, ಮಳೆಗಾಲದ ಸಮಯದಲ್ಲಿ ಈ ಜೆಟ್ಟಿಯನ್ನು ಸುಲಭವಾಗಿ ಬಿಚ್ಚಿಡಲು ಸಾಧ್ಯವಾಗುವಂತೆ ಜೆಟ್ಟಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಲ್ಪೆ ಬೀಚ್ ನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಿಂದ ನಿಗಧಿಪಡಿಸಲಾಗಿರುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸುವಂತೆ ಹಾಗೂ ಶೆಲ್ಟರ್ ಹಾಗೂ ವಾಚ್ ಟವರ್ ನಿರ್ಮಿಸುವಂತರೆ ಕೆಆರ್‍ಐಡಿಎಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ತ್ರಾಸಿ – ಮರವಂತೆಯಲ್ಲಿ ಸಮುದ್ರದ ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದ್ದು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 20 ಸಂಖ್ಯೆಯ ಅಂಗಡಿಗಳನ್ನು ನಿರ್ಮಿಸಿ, ಹಿಂತೆ ಅಂಗಡಿ ತೆರವುಗೊಳಿಸಿರುವವರಿಗೆ ನೀಡುವ ಕುರಿತಂತೆ ಸೂಚಿಸಿದ ಜಿಲ್ಲಾಧಿಕಾರಿ, ತ್ರಾಸಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ವಸತಿಗೃಹವನ್ನು, ಪಾರಂಪರಿಕ ರೀತಿಯಲ್ಲಿ ಆಕರ್ಷಕವಾಗಿ ನವೀಕರಣಗೊಳಿಸುವ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಹಾಗೂ ತ್ರಾಸಿ ಸಮುದ್ರ ತೀರದಲ್ಲಿ ವಾಚ್ ಟವರ್ ನಿರ್ಮಿಸುವಂತೆ ಹಾಗೂ ಲೈಟಿಂಗ್ ವ್ಯವಸ್ಥೆ ಕುರಿತು ಪರಿಶೀಲಿಸುವಂತೆ ಕೆಆರ್‍ಐಡಿಎಲ್ ಅಧಿಕಾರಿಗಳಿಗೆ ಸೂಚಿಸಿದರು.

ತ್ರಾಸಿ ಮರವಂತೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಗವನ್ನು ಗುರುತಿಸಿ ಬೇಲಿ ಅಳವಡಿಸುವಂತೆ ಹಾಗೂ ಯಾತ್ರಿ ನಿವಾಸ ನಿರ್ಮಿಸುವ ಕುರಿತಂತೆ ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 2 ಹೌಸ್ ಬೋಟ್ ಗಳಿಗೆ ಅನುಮೋದನೆ ನೀಡಲಾಗಿದ್ದು, ಹೊಸದಾಗಿ 5 ಹೌಸ್ ಬೋಟ್ ಗಳಿಗೆ ಅನುಮತಿ ಕೋರಿರುವ ಕುರಿತಂತೆ ಚರ್ಚೆ ನಡೆಯಿತು. ಹೌಸ್ ಬೋಟ್ ಗಳ ಸಂಖ್ಯೆ ಸಂಬಂದಪಟ್ಟ ನದಿಯಲ್ಲಿ ಹೆಚ್ಚಾಗದಂತೆ ಪರಿಶೀಲಿಸಿ ಅನುಮತಿ ನೀಡುವಂತೆ ಹಾಗೂ ಹೌಸ್ ಬೋಟ್ ಗಳ ನಿರ್ವಹಣೆ ಕುರಿತಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುವಂತೆ ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಪಡುಬಿದ್ರೆ ಬೀಚ್ ಗೆ ಬ್ಲೂ ಫ್ಲಾಗ್ ಸರ್ಟಿಫಿಕೇಷನ್ ನೀಡುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕಾರ್ಯ ನಿರ್ವಹಿಸಲು ಉಪ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದರು.

ಕಾರ್ಕಳದ ಕೋಟಿ ಚೆನ್ನಯ್ಯ ಥೀಂ ಪಾಕ್ ನಲ್ಲಿ , ಜಿಲ್ಲೆಯ ಪ್ರವಾಸೋದ್ಯಮವನ್ನು ಬಿಂಬಿಸುವಂತೆ ಆಕಷಕ ಉದ್ಯಾನವನ ನಿರ್ಮಿಸುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಸರ್ಫಿಂಗ್ ಕ್ರೀಡೆಗೆ ಉತ್ತೇಜನ ನೀಡುವ ಕುರಿತಂತೆ , ಸೆಪ್ಟಂಬರ್ 29 ಮತ್ತು 30 ರಂದು ಪಡುಕೆರೆಯಲ್ಲಿ ರಾಜ್ಯಮಟ್ಟದ ಸರ್ಫಿಂಗ್ ಸ್ಪರ್ಧೆ ನೆಡೆಸುವ ಕುರಿತಂತೆ ತೀರ್ಮಾನಿಸಲಾಯಿತು.

ಸೋಷಿಯಲ್ ಮೀಡಿಯಾ ಗಳಲ್ಲಿ ಜಿಲ್ಲೆಯ ಪ್ರವಾಸೋದ್ಯಮವನ್ನು ಪ್ರಮೋಟ್ ಮಾಡುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವೃದ್ದಿ ಪಡಿಸುವ ಕುರಿತಂತೆ , ಹೋಂ ಸ್ಟೇ ಮಾಲೀಕರು, ಹೌಸ್ ಬೋಟ್ ಮಾಲೀಕರು ಹಾಗೂ ಬೀಚ್ ಟೆಂಡರ್‍ದಾರರು ಮತ್ತು ಪ್ರವಾಸೊದ್ಯಮದಲ್ಲಿ ತೊಡಗಿರುವ ಎಲ್ಲರಿಗೂ ತರಬೇತಿ ನೀಡುವ ಕುರಿತಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love