ಸೋಮೇಶ್ವರ ಪುರಸಭೆ ಚುನಾವಣೆ: ಮಧ್ಯಾಹ್ನದವರೆಗೆ ಶೇ.32 % ಮತದಾನ

Spread the love

ಸೋಮೇಶ್ವರ ಪುರಸಭೆ ಚುನಾವಣೆ: ಮಧ್ಯಾಹ್ನದವರೆಗೆ ಶೇ.32 % ಮತದಾನ

ಉಳ್ಳಾಲ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರ ಪುರಸಭೆಯಾಗಿ ಮೇಲ್ದಜೆರಗೇರಿದ ಬಳಿಕ ಪ್ರಥಮ ಚುನಾವಣೆ ಇಂದು ನಡೆಯುತ್ತಿದ್ದು, ಮಧ್ಯಾಹ್ನದವರೆಗೆ ಶೇ.32 ಮತದಾನ ನಡೆಯುತ್ತಿದ್ದು, ಶಾಂತಿಯುತವಾಗಿ ಉತ್ಸಾಹದಿಂದ ಮತದಾರರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

23 ವಾರ್ಡ್‍ಗಳಿಗೆ ನಡೆಯುವ ಚುನಾವಣೆಯಲ್ಲಿ ಒಟ್ಟು 50 ಅಭ್ಯರ್ಥಿಗಳು (25 ಪುರುಷ ಅಭ್ಯರ್ಥಿಗಳು, 25 ಮಹಿಳಾ ಅಭ್ಯರ್ಥಿಗಳು)ಕಣದಲ್ಲಿದ್ದು ಪುರಸಭೆಯ 22,502 ಮತದಾರರು ಇದ್ದಾರೆ. 23 ಮತದಾನ ಕೇಂದ್ರಗಳಲ್ಲಿ ಮತದಾನ ಬೆಳಿಗ್ಗೆ 7 ರಿಂದ ಆರಂಭಗೊಂಡಿದೆ.

ಗ್ರಾಮ ಪಂಚಾಯತ ಅವಧಿಯಲ್ಲಿ 30 ವರುಷಗಳ ಕಾಲ ಬಿಜೆಪಿ ಪ್ರಾಬಲ್ಯವಿದ್ದ ಸೋಮೇಶ್ವರದಲ್ಲಿ, ಎಲ್ಲಾ 23 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸಿದರೆ, ಕಾಂಗ್ರೆಸ್ 22 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 3ನೇ ವಾರ್ಡ್‍ನಲ್ಲಿ ಸಿಪಿಐಎಂ ಆಭ್ಯರ್ಥಿಗೆ ಬೆಂಬಲ ಸೂಚಿಸಿದೆ. 19 ವಾರ್ಡ್‍ಗಳಲ್ಲಿ 18 ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇದ್ದರೆ, ಒಂದು ವಾರ್ಡ್‍ನಲ್ಲಿ ಬಿಜೆಪಿ – ಸಿಪಿಐಎಂ ನಡುವೆ ಸ್ಪರ್ಧೆ ನಡೆಯಲಿದೆ. ಉಳಿದ ನಾಲ್ಕು ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಿಪಿಐಎಂ, ಎಎಪಿ, , ಸೋಷಿಯಲ್ ವೆಲ್ಫೇರ್ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಲ್ಲಿದ್ದು, ಇಲ್ಲಿ ಮೂರನೇ ಅಭ್ಯರ್ಥಿಯ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕವಾಗಲಿದೆ.

6 ಶಾಲೆಗಳಲ್ಲಿ 23 ಮತದಾನ ಕೇಂದ್ರ: ಸೋಮೇಶ್ವರ ಪುರಸಭೆ ವ್ಯಾಪ್ತಿಯ 6 ಶಾಲೆಗಳಲ್ಲಿ 23 ವಾರ್ಡ್‍ಗಳ ಮತದಾನ ಕೇಂದ್ರ ಇದ್ದು, ಕುಂಪಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪೌಢಶಾಲೆಯಲ್ಲಿ ಅತೀ ಹೆಚ್ಚು 8 ಮತದಾನ ಕೇಂದ್ರವಿದ್ದರೆ, ಸ್ಟೆಲ್ಲಾ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ಮತದಾನ ಕೇಂದ್ರವಿದೆ. ಉಳಿದಂತೆ ಉಚ್ಚಿಲ ಬೋವಿ ಆಂಗ್ಲ ಮಾದ್ಯಮ ಶಾಲೆ 5 ಮತದಾನ ಕೇಂದ್ರಗಳು, ಆನಂದಾಶ್ರಮ, ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆನಂದಾಶ್ರಮ ಶಾಲೆಯಲ್ಲಿ ತಲಾ ಎರಡು ಮತದಾನ ಕೇಂದ್ರಗಳಿವೆ

ಮಹಿಳಾ ಮತದಾರರ ಪ್ರಾಬಲ್ಯ : 22502 ಮತದಾರರರುವ ಸೋಮೇಶ್ವರದಲ್ಲಿ 11,697 ಮಹಿಳಾ ಮತದಾರರಿದ್ದು, 10,503 ಪುರುಷ ಮತದಾರರಿದ್ದಾರೆ. ಇಬ್ಬರು ಟ್ರಾನ್ಸ್‍ಜೆಂಡರ ಮತದಾರರಿದ್ದು, ಮಹಿಳಾ ಮತದಾರರ ಪ್ರಾಬಲ್ಯವಿದೆ. : 23 ವಾರ್ಡ್‍ಗಳಲ್ಲಿ 3ನೇ ವಾರ್ಡ್ ಲಕ್ಷ್ಮಿಗುಡ್ಡೆ ಪ್ರಕಾಶ್‍ನಗರದಲ್ಲಿ ಅತೀ ಕಡಿಮೆ 642 ಮತದಾರರಿದ್ದರೆ 10ನೇ ವಾರ್ಡ್ ಚೇತನನಗರದಲ್ಲಿ 1494 ಆತೀ ಹೆಚ್ಚು ಮತದಾರರಿದ್ದಾರೆ.

ಸಹಾಯಕ ಆಯುಕ್ತರು, ತಹಶೀಲ್ದಾರರಿಂದ ಭೇಟಿ
ಎಲ್ಲಾ ಮತಗಟ್ಟೆಗಳಿಗೆ ಸಹಾಯಕ ಆಯುಕ್ತರಾದ ಹರ್ಷ ಹಾಗೂ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಗಳನ್ನು ಗಮನಿಸಿದರು. ಈ ವೇಳೆ ಮಾಧ್ಯಮದ ಜತೆಗೆ ಮಾತನಾಡಿದ ಸಹಾಯಕ ಆಯುಕ್ತರು, 23 ಬೂತ್ ಗಳಲ್ಲಿಯೂ ಶಾಂತಿಯುತವಾಗಿ ಬೆಳಿಗ್ಗೆ 7 ರಿಂದ ಮತದಾನ ನಡೆದಿದೆ. 7 ಗಂಟೆ ಹೊತ್ತಿಗೆ ಶೇ16 ಮತದಾನ ನಡೆದಿದ್ದರೆ, 11 ಗಂಟೆ ಹೊತ್ತಿಗೆ ಶೇ.32 ಪೂರ್ಣಗೊಂಡಿದೆ. ಪುರಸಭಾ ವ್ಯಾಪ್ತಿಯಲ್ಲಿ ಎಲ್ಲಿಯೂ ಸೂಕ್ಷ್ಮ ಮತಗಟ್ಟೆಗಳಿಲ್ಲ . ಎಲ್ಲರೂ ಪ್ರಜಾಪ್ರಭುತ್ವ ಹಕ್ಕು ಮತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ತಹಶೀಲ್ದಾರ್ ಪುಟ್ಟರಾಜು ಮಾತನಾಡಿ, 22502 ಮತದಾರರರುವ ಸೋಮೇಶ್ವರದಲ್ಲಿ 11,697 ಮಹಿಳಾ ಮತದಾರರಿದ್ದು, 10,503 ಪುರುಷ ಮತದಾರರಿದ್ದಾರೆ. ಬ್ಯಾನರ್, ಬೋರ್ಡುಗಳನ್ನು ಅಳವಡಿಸದೆ ಶಾಂತಿಯುತವಾಗಿ ಚುನಾವಣಾ ಪ್ರಚಾರ ಕಾರ್ಯ ನಡೆದಂತೆ, ಮತದಾನ ಕೇಂದ್ರಗಳು ರಾಜಕೀಯ ಪಕ್ಷಗಳಿಂದ, ಸೋಮೇಶ್ವರದ ಜನತೆಯ ಸಹಕಾರದಿಂದ ಶಾಂತಿಯುತವಾಗಿ ನಡೆದಿದೆ.


Spread the love