ಸ್ಥಳೀಯ ವಾಹನಗಳಿಗೆ ಟೋಲ್ ಪಡೆದರೆ ಪ್ರತಿಭಟನೆ – ಶಾಸಕ ಡಾ. ಭರತ್ ಶೆಟ್ಟಿ

ಸ್ಥಳೀಯ ವಾಹನಗಳಿಗೆ ಟೋಲ್ ಪಡೆದರೆ ಪ್ರತಿಭಟನೆ – ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು: ಟೋಲ್ ಗುತ್ತಿಗೆ ವಹಿಸಿಕೊಂಡ ಗುತ್ತಿಗೆ ಕಂಪನಿಗೆ ನಷ್ಟವಾಗುತ್ತಿದೆ ಎಂದು ಸ್ಥಳೀಯ ವಾಹನಗಳಿಂದ ಸುಂಕ ಪಡೆಯುವುದಕ್ಕೆ ನನ್ನ ವಿರೋಧವಿದೆ. ಬಲವಂತವಾಗಿ ಸ್ಥಳೀಯ ವಾಹನಗಳಿಂದ ಟೋಲ್ ಪಡೆದರೆ ಉಗ್ರ ಪ್ರತಿಭಟನೆಯನ್ನು ಬಿಜೆಪಿ ನಡೆಸುತ್ತದೆ ಎಂದು ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ .

ಸುರತ್ಕಲ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟೋಲ್ ಪಡೆಯುವುದಕ್ಕಾಗಿಯೇ ನ್ಯೂ ಮಂಗಳೂರು ಪೋರ್ಟ್ ರೋಡ್ ಎಂದು ಬದಲಾಯಿಸಲಾಗಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾನೂನಿನ ಅಡಿ ಸುಂಕ ವಸೂಲಿ ಮಾಡಲಾಗುತ್ತಿದೆ. ಇದೀಗ ನಷ್ಟದ ನೆಪವೊಡ್ಡಿ ಸ್ಥಳೀಯ ವಾಹನಗಳಿಗೆ ಇರುವ ವಿನಾಯಿತಿಯನ್ನು ರದ್ದು ಪಡಿಸಿ ಹಣ ವಸೂಲಿ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಇದಕ್ಕೆ ನನ್ನ ಸ್ಪಷ್ಟ ವಿರೋಧವಿದೆ. ತತ್ಕ್ಷಣ ಈ ನಿರ್ಧಾರದಿಂದ ಗುತ್ತಿಗೆ ಕಂಪನಿ ಹಿಂದೆ ಸರಿಯಬೇಕು. ಜಿಲ್ಲಾಧಿಕಾರಿಗಳು ಸ್ಥಳೀಯರ ಸಮಸ್ಯೆಯನ್ನು , ಕಾನೂನು ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು. ಪೊಲೀಸ್ ಬಲ ಪ್ರಯೋಗಿಸಿ ಹಣ ವಸೂಲಿ ಮಾಡಿದರೆ ನನ್ನ ನೇತೃತ್ವದಲ್ಲೇ ಬಿಜೆಪಿ ಉತ್ತರ ಘಟಕ ತೀವ್ರ ಪ್ರತಿಭಟಿಸಿ ಇದಕ್ಕೆ ತಡೆ ಒಡ್ಡಲಿದೆ ಎಂದು ಅವರು ತಿಳಿಸಿದ್ದಾರೆ.