ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ; ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್  

Spread the love

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ; ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್  

ಉಡುಪಿ: ಜಿಲ್ಲೆಯ  ಸ್ಥಳೀಯ ಸಂಸ್ಥೆಗಳಿಗೆ ಅಗಸ್ಟ್ 31 ರಂದು ನಡೆದ  ಚುನಾವಣಾ ಫಲಿತಾಂಶ ರ್ಸೋಮವಾರ ಪ್ರಕಟಗೊಂಡಿದ್ದು ವಿಧಾನಸಭಾ ಚುನಾವಣೆಯ ಫಲಿತಾಂಶದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ.  ಜಿಲ್ಲೆಯ ಉಡುಪಿ ನಗರಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತಿನಲ್ಲಿ ಬಿಜೆಪಿ ನಿಚ್ಚಳ ಜಯಭೇರಿ ಬಾರಿಸಿದೆ.

ಉಡುಪಿ ನಗರಸಭೆಯಲ್ಲಿ ಬಿಜೆಪಿ ಪಾರಮ್ಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಅಧಿಕಾರವನ್ನು ಕಸಿದುಕೊಂಡಿದೆ. ಉಡುಪಿ ನಗರಸಭೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಈ ನಗರ ಸಭೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂಲಕ ದೇಶದಲ್ಲೇ ಬಿಜೆಪಿಗೆ ಪ್ರಥಮ ಅಧಿಕಾರ ಕೊಟ್ಟಿದೆ. ಈ ನಗರಸಭೆಯಲ್ಲಿ 1968 ರಲ್ಲಿ ಜನಸಂಘ ಅಧಿಕಾರ ಹಿಡಿದಿತ್ತು.   ನಗರ ಸಭೆಯಲ್ಲಿ ಬಿಜೆಪಿ 31 ಮತ್ತು ಕಾಂಗ್ರೆಸ್4 ಸ್ಥಾನಗಳನ್ನು ಗಳಿಸಿದೆ.

ಕುಂದಾಪುರ ಪುರಸಭೆಯಲ್ಲಿ ಬಿಜೆಪಿ 14, ಕಾಂಗ್ರೆಸ್ 8 ಮತ್ತು ಪಕ್ಷೇತರ 1 ಗೆಲವು ಸಾಧಿಸಿದ್ದು, ಬಿಜೆಪಿ ಅಧಿಕಾರಕ್ಕೆ ಏರಲಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ರಾಜೇಶ್ ಕಾವೇರಿಗೆ ಬಿಜೆಪಿಯೆದುರು ಸೋಲಾಗಿದ್ದು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತೆ ಮೇಲುಗೈ ಸಾಧಿಸಿದ್ದಾರೆ.

ಕಾರ್ಕಳ ಪುರಸಭೆಯಲ್ಲಿ   ಫಲಿತಾಂಶ ಅತಂತ್ರವಾಗಿ ಬಂದಿದ್ದು, ಕಾಂಗ್ರೆಸ್ ಬಿಜೆಪಿಗೆ ಸಮಬಲ ಫಲಿತಾಂಶ ಬಂದಿದೆ. ಬಿಜೆಪಿ 11, ಕಾಂಗ್ರೆಸ್ 11 ಮತ್ತು ಪಕ್ಷೇತರ 1 ಸ್ಥಾನವನ್ನು ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಶಾಸಕರು, ಸಂಸದರಿಗೆ ಮತ ಚಲಾಯಿಸುವ ಹಕ್ಕು ಇದ್ದು, ಬಿಜೆಪಿ ಶಾಸಕರ ಮತ್ತು ಸಂಸದರ ಮತ ಬಳಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಈಗ ಪಕ್ಷೇತರ ವಿಜಯಿ ಲಕ್ಷ್ಮೀನಾರಾಯಣ ಮಲ್ಯ ಅವರ ಬೆಂಬಲ ಬಿಜೆಪಿಗೆ ಸಿಗಲಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 10, ಕಾಂಗ್ರೆಸ್ 5 ಹಾಗು ಪಕ್ಷೇತರ 1 ಸ್ಥಾನವನ್ನು ಗಳಿಸಿದ್ದು, ಒಂದು ಅಂಚೆ ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇವರು ಪುನೀತ್ ಪೂಜಾರಿ 4ನೇ ವಾರ್ಡ್ ಅಭ್ಯರ್ಥಿಯಾಗಿದ್ದಾರೆ.

ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್ ಈ ಹಿಂದೆಲ್ಲ ಕಾಂಗ್ರೆಸ್ ನವರು ಗಾಳಿಯಿಂದಾಗಿ, ಅಪಪ್ರಚಾರದಿಂದಾಗಿ ಬಿಜೆಪಿ ಗೆದ್ದಿದೆ ಅನ್ನುತ್ತಿದ್ದರು. ಇದು ಕಾರ್ಯಕರ್ತರ ಗೆಲುವು ಎನ್ನುವುದು ಸಾಬೀತಾಗಿದೆ. ಉಡುಪಿ ನಗರಸಭೆ ಗೆಲುವು ಐತಿಹಾಸಿಕ ಕಾರಣಕ್ಕೂ ಸ್ಮರಿಸುವಂತಹ ಗೆಲುವು. ಐವತ್ತು ವರ್ಷ ಹಿಂದೆ ಇಡೀ ದೇಶದಲ್ಲೇ ಮೊದಲ ಬಾರಿಗೆ ಜನಸಂಘ ಉಡುಪಿ ನಗರಸಭೆಯನ್ನು ಗೆದ್ದುಕೊಂಡಿತ್ತು. ಈಗ ಬಿಜೆಪಿಗೆ ಭಾರೀ ಬಹುಮತ ಬಂದಿದೆ. ಈ ಗೆಲುವನ್ನು ಅಟಲ್ ಬಿಹಾರಿ ವಾಜಪೇಯಿ, ಡಾ. ವಿ.ಎಸ್ ಆಚಾರ್ಯರಿಗೆ ಸಲ್ಲಿಸಲಾಗುವುದುಎಂದು ತಿಳಿಸಿದರು.


Spread the love