ಸ್ವಂತ ತಾಯಿ, ಮಕ್ಕಳಿಗೆ ನಿದ್ದೆ ಮಾತ್ರೆ ನೀಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

Spread the love

ಸ್ವಂತ ತಾಯಿ, ಮಕ್ಕಳಿಗೆ ನಿದ್ದೆ ಮಾತ್ರೆ ನೀಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಮಂಗಳೂರು : ಮಹಿಳೆಯೊಬ್ಬರು ತನ್ನ ಒಂದುವರೆ ವರ್ಷ ಪ್ರಾಯದ ಪುತ್ರಿಗೆ ನಿದ್ರೆ ಮಾತ್ರೆ ನೀಡಿ ಕೊಂದ ಬಳಿಕ ಸ್ವತಃ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಶಕ್ತಿನಗರದಲ್ಲಿ ನಡೆದಿದೆ. ಈ ವೇಳೆ ತನ್ನ ಪುತ್ರ ಮತ್ತು ತಾಯಿಗೂ ಆ ಮಹಿಳೆ ನಿದ್ರೆ ಮಾತ್ರೆ ನೀಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಶಕ್ತಿನಗರದ ಕೆ.ಎಚ್.ಬಿ. ಕಾಲನಿಯ ಪ್ರಮಿಳಾ (38) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಆಕೆಯ ತಾಯಿ ಶಶಿಕಲಾ (60) ಮತ್ತು ಪುತ್ರ ಆಶಿಸ್ (15) ಪ್ರಾಣಾಪಾಯದಿಂದ ಪಾರಾದವರು.

ಪ್ರಮಿಳಾ ಅವರ ಪತಿ ರವಿ ಶೆಟ್ಟಿ ಕೂಳೂರು ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಶನಿವಾರವೂ ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ಪತ್ನಿ ಪ್ರಮಿಳಾ, ಆಕೆಯ ತಾಯಿ ಶಶಿಕಲಾ, ಪುತ್ರ ಆಶಿಸ್ ಮತ್ತು ಒಂದುವರೆ ವರ್ಷದ ಪುತ್ರಿ ಮಾತ್ರ ಇದ್ದರು. ಮಧ್ಯಾಹ್ನ ಊಟದ ವೇಳೆ ಪ್ರಮೀಳಾ ಮನೆಯಲ್ಲಿದ್ದ ಎಲ್ಲರಿಗೂ ನಿದ್ರೆ ಮಾತ್ರೆ ನೀಡಿದ್ದು, ಅವರೆಲ್ಲರೂ ನಿದ್ರೆಗೆ ಜಾರಿದ ಬಳಿಕ ಆಕೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆಯ ವೇಳೆ ನಿದ್ರೆ ಮಾತ್ರೆಯ ಅಮಲು ಇಳಿದ ಬಳಿಕ ಶಶಿಕಲಾರಿಗೆ ಎಚ್ಚರವಾಗಿದ್ದು, ಅವರು ಚಹಾ ಮಾಡಿ ಪುತ್ರಿ ಪ್ರಮಿಳಾರನ್ನು ಕರೆಯಲು ಮಾಳಿಗೆಗೆ ತೆರಳಿದಾಗ ಆಕೆ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಸು ಪಾಸಿನ ಜನರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಈ ವೇಳೆ ಒಂದುವರೆ ವರ್ಷ ಪ್ರಾಯದ ಪುತ್ರಿ ನಿದ್ದೆ ಮಾತ್ರೆಯಿಂದ ಮೃತಪಟ್ಟಿದೆ. ಪುತ್ರ ಆಶಿಸ್ ನಿದ್ದೆಯ ಅಮಲಿನಲ್ಲಿದ್ದರೂ ಬಳಿಕ ಆತನಿಗೆ ಎಚ್ಚರವಾಗಿದೆ ಅವರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಕಂಕನಾಡಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಜರಗಿಸಿದ್ದಾರೆ.


Spread the love