ಸ್ವಚ್ಚ ಹಾಗೂ ನಿರ್ಮಲ ಪರಿಸರ ನಿರ್ಮಾಣದತ್ತ ಕೆಥೊಲಿಕ್ ಸಭಾದಿಂದ ಅಭಿಯಾನ

Spread the love

ಸ್ವಚ್ಚ ಹಾಗೂ ನಿರ್ಮಲ ಪರಿಸರ ನಿರ್ಮಾಣದತ್ತ ಕೆಥೊಲಿಕ್ ಸಭಾದಿಂದ ಅಭಿಯಾನ

ಉಡುಪಿ: ಸ್ವಚ್ಚ ಹಾಗೂ ನಿರ್ಮಲ ಪರಿಸರ ಅಭಿಯಾನ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ ಏಕಕಾಲದಲ್ಲಿ ಇತರ ಸಮಾಜಮುಖಿ ಸಂಘಟನೆಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯಾದ್ಯಂತ ಪರಿಸರ ಅಭಿಯಾನ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಿತು.

ಧರ್ಮಪ್ರಾಂತ್ಯ ಹಂತದಲ್ಲಿ ಉದ್ಘಾಟನೆಯನ್ನು ಶಂಕರಪುರದ ಸಂತ ಜೋನರ ಚರ್ಚಿನಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್‍ ಇದರ ಆಧ್ಯಾತ್ಮಿಕ ನಿರ್ದೇಶಕರಾದ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಗಿಡ ನೆಟ್ಟು ಬಳಿಕ ರಸ್ತೆ ಬದಿಯ ಕಸವನ್ನು ಆಯುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಮಾಜಿ ಅಧ್ಯಕ್ಷ ಎಲ್ ರೋಯ್ ಕಿರಣ್ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ ಸಾಮಾಜಿಕ ಕಳಕಳಿಯ ಜೊತೆ ನಮ್ಮನ್ನು ನಾವು ಆರೋಗ್ಯವಂತರಾಗಲು ಸ್ವಸ್ಥ ಹಾಗೂ ನಿರ್ಮಲ ಪರಿಸರ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕೆಥೊಲಿಕ್ ಸಭಾ ಕಳೆದ ಹಲವಾರು ವರ್ಷಗಳಿಂದ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಇಂದು ಈ ಅಭಿಯಾನವು ಉಡುಪಿ ಧರ್ಮಪ್ರಾಂತ್ಯದ 50 ಚರ್ಚುಗಳಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ ಎಂದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಮಾತನಾಡಿ, ಸ್ವಚ್ಚತೆಯ ಪರಿಪಾಠ ನಮ್ಮ ಹೃದಯದಿಂದ ಬಂದಾಗ ನಾನು ಅಭಿವೃದ್ಧಿ ಕಾಣಲು ಸಾಧ್ಯ. ಇತರ ದೇಶಗಳಿಗೆ ಹೋಲಿಸಿದರೆ ನಾವು ಭಾರತೀಯರು ಅವರಿಂದ ಸ್ವಚ್ಚತೆಯ ಬಗ್ಗೆ ಸಾಕಷ್ಟು ಕಲಿಯಲು ಇದೆ ಎಂದರು.

ರೋಟರಿ ಕ್ಲಬ್ ಶಂಕರಪುರ ಇದರ ಅಧ್ಯಕ್ಷ ರೋ. ಚಂದ್ರ ಪೂಜಾರಿ, ಕೆಥೊಲಿಕ್ ಸಭಾ ಪಾಂಗಾಳ ಘಟಕದ ಉಪಾಧ್ಯಕ್ಷ ವಿಕ್ಟರ್ ಮೆಂಡೊನ್ಸಾ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಐಸಿವೈಎಮ್ ಅಧ್ಯಕ್ಷ ಅ್ಯರನ್ ಡಿಸೋಜಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮಾರ್ಕ್ ವಾಜ್ ಉಪಸ್ಥಿತರಿದ್ದರು.

ಸ್ವಚ್ಚತಾ ಅಭಿಯಾನದ ಪ್ರಯುಕ್ತ ಜಿಲ್ಲೆಯ 50 ಚರ್ಚುಗಳಲ್ಲಿ ಪರಿಸರ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರ, ಜಾಗೃತಿ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಗಿಡಗಳ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮಗಳು ನಡೆದವು.


Spread the love