ಸ್ವಾಭಿಮಾನದ ಬದುಕಿಗೆ ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕಿರುಕಳ; ಸೂಕ್ತ ರಕ್ಷಣೆಗೆ ಆಗ್ರಹ

Spread the love

ಸ್ವಾಭಿಮಾನದ ಬದುಕಿಗೆ ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕಿರುಕಳ; ಸೂಕ್ತ ರಕ್ಷಣೆಗೆ ಆಗ್ರಹ

ಮಂಗಳೂರು: ಸ್ವಾಭಿಮಾನದ ಬದುಕನ್ನು ಬದುಕಲು ಪ್ರಯತ್ನಿಸುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ನಾಯಕಿಯರು ಎನಿಸಿಕೊಂಡವರು ವಿವಿಧ ರೀತಿಯ ಕಿರುಕುಳ ನೀಡುವುದರೊಂದಿಗೆ ಬಲವಂತವಾಗಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಅಥವಾ ಭಿಕ್ಷೆ ಬೇಡಿ ದಿನ ದೂಡುವ ಕೆಲಸ ನಗರದಲ್ಲಿ ನಡೆಯುತ್ತಿದೆ ಎಂದು ಪರಿವರ್ತನಾ ಚಾರಿಟೇಬಲ್ ಟ್ರಸ್ಟಿನ ಸದಸ್ಯರು ದೂರಿದರು.

ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಸ್ಟಿನ ಕೋಶಾಧಿಕಾರಿ ಶ್ರೀನಿಧಿ ಮಂಗಳಮುಖಿಯರಾಗಿ ಯಾವುದೇ ರೀತಿಯ ಆಸರೆ ಇಲ್ಲದೆ ಬದುಕುತ್ತಿದ್ದ ನಮಗೆ ವಾಯ್ಲೆಟ್ ಪಿರೇರಾರವರು ನಮ್ಮ ಉತ್ತಮ ಭವಿಷ್ಯಕ್ಕಾಗಿ ಅಂತೆಯೇ ನಮ್ಮನ್ನು ಮುಖ್ಯವಾಹಿನಿಗೆ ತರಲು ತುಂಬಾ ಶ್ರಮಿಸುತ್ತಿದ್ದಾರೆ. ಹಾಗಿರುವಾಗ ನಮ್ಮನ್ನು ಪರಿವರ್ತನಾ ಟ್ರಸ್ಟಿಗೆ ಹೋಗಬಾರದು, ಅದರ ಸದಸ್ಯರಾಗಬಾರದು ಎಂಬ ಬೆದರಿಕೆಯನ್ನು ಕೂಡ ಹಾಕಿದ್ದರು. 2016 ಅಗಸ್ಟ್‍ನಲ್ಲಿ ಪರಿವರ್ತನಾ ಮಾ ಗುರುಗಳು ಎಂದು ಕರೆಯುವ ಕೆಲವುರು ನಮ್ಮನ್ನು ಪರಿವರಿವರ್ತನಾ ಸಂಘಕ್ಕೆ ಹೋಗಬಾರದು, ನೀವು ಭಿಕ್ಷೆ ಬೇಡಿ ಅಥವಾ ಲೈಂಗಿಕ ಕಾರ್ಯಕರ್ತೆಯರಾಗಿ ಜೀವನವನ್ನು ನಡೆಸಬೇಕು. ನಮಗೆ ಯಾವುದೇ ಸಂಘಸಂಸ್ಥೆಯೂ ಬೇಡ ಎಂದು ನಮ್ಮನ್ನು ತಡೆದಿದ್ದರು. ಆದರೆ ನಮ್ಮ ವಾಯ್ಲೆಟ್ ಮೇಡಮ್ ನಮಗೋಸ್ಕರ ತುಂಬಾ ಕೆಲಸಗಳನ್ನು ಮಾಡುತ್ತಿದ್ದಾರೆ. ನಮಗೆ ತೊಂದರೆಯಾದಾಗ ನಮಗೆ ಸಹಾಯ ಮಾಡುತ್ತಾರೆ. ಆದ್ದರಿಂದ ನಾವು ಪರಿವರ್ತನಕ್ಕೆ ಹಿಂದೆ ಬಂದೆವು. ನಮಗೆ ಸರಕಾರದಿಂದ ಬರುವ ಸವಲತ್ತುಗಳನ್ನು ಕೊಡಿಸಲು ವಾಯ್ಲೆಟ್ ಮೇಡಮ್ ತುಂಬಾ ಸಹಾಯ ಮಾಡಿದ್ದಾರೆ. ಆಧಾರ್ ಕಾರ್ಡ್ ಮಾಡಿಸಲು ಪರಿವರ್ತನಾ ಟ್ರಸ್ಟ್‍ನ ಕಚೇರಿಗೆ ಮೇಷಿನ್ ತರಿಸಿ ನಮ್ಮ ಕಾರ್ಡುಗಳನ್ನು ಮಾಡಿಸಿದ್ದಾರೆ. ನಮಗೆ 17 ಮಂದಿಗೆ ಟೈಲರಿಂಗ್ ಮತ್ತು ಬ್ಯೂಟಿಷಿಯನ್ ಕೋರ್ಸ್ ಮಾಡಿಸಲು ಅರ್ಜಿ ಹಾಕಿಸಿದ್ದು, ಸದ್ಯದಲ್ಲಯೇ ಈ ಕೋರ್ಸುಗಳು ಪ್ರಾರಂಭ ಆಗಲಿವೆ.

ನಮಗೆ ಯಾರೂ ಕೂಡ ಕೆಲಸ ಕೊಡಲು ತಯಾರಿಲ್ಲ ಆದ್ದರಿಂದ ಭಿಕ್ಷೆ ಬೇಡುವುದು, ಲೈಂಗಿಕ ಕಾರ್ಯಗಳಲ್ಲಿ ತೊಡಗುವುದು ನಮಗೆ ಅನಿವಾರ್ಯವಾಗಿದೆ. ನಮ್ಮ ಮುಖ್ಯಸ್ಥೆ ರಾಣಿ ಎನ್ನುವವರು ನಮ್ಮ ದುಡಿಮೆಯ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದು, ಅದನ್ನು ನೀಡಲು ನಿರಾಕರಿಸಿದ್ದಲ್ಲಿ ಗೂಂಡಾಗಳನ್ನು ಕಳುಹಿಸಿ ನಮ್ಮ ಮೇಲೆ ಧಾಳಿ ಮಾಡಿಸುತ್ತಾರೆ. ನಾನು ಕೂಡ ಹಣ ನೀಡುವುದಕ್ಕೆ ನಿರಾಕರಿಸಿದಾಗ ಹಲವು ಬಾರಿ ಬೆದರಿಕೆ ಕೂಡ ಹಾಕಿದ್ದರು ಅಲ್ಲದೆ ಚಪ್ಪಲಿಯಿಂದ ನನ್ನ ಮೇಲೆ ಧಾಳಿ ಕೂಡ ಮಾಡಿದ್ದರು. ಭಾನುವಾರ ನಮ್ಮ ತಂಡದ ಸದಸ್ಯೆ ಹಣ ನೀಡಲು ನಿರಾಕರಸಿದಾಗ ಗೂಂಡಗಳ ಮೂಲಕ ಕಲ್ಲಿನಿಂದ ಧಾಳಿ ನಡೆಸಿದ್ದಾರೆ. ನಮಗೆ ಯಾವುದೇ ರೀತಿ ಭದ್ರತೆ ಕೂಡ ಇಲ್ಲದ ಕಾರಣ ಹೆದರಿಕೆಯಿಂದಲೇ ಬದುಕಬೇಕಾಗಿದೆ. ನಮಗೆ ನ್ಯಾಯದ ಅಗತ್ಯವಿದ್ದು, ಹಣ ವಸೂಲಿಯನ್ನು ನಿಲ್ಲಿಸಬೇಕಾಗಿದೆ ಎಂದರು.

ಗೂಂಡಾಗಳಿಂದ ಹಲ್ಲೆಗೊಳಗಾದ ಪ್ರಿಯಾ ಮಾತನಾಡಿ ನಾನು ಮಂಗಳೂರಿಗೆ ಏಳು ವರುಷಗಳ ಹಿಂದೆ ಬಂದಿದ್ದು, ಬದುಕಿಗಾಗಿ ಭಿಕ್ಷೆ ಬೇಡುವುದು ಲೈಂಗಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೆ. ಮಂಗಳಮುಖಿಯಾಗಿರುವುದರಿಂದ ಯಾರು ಕೂಡ ನಮಗೆ ಕೆಲಸ ನೀಡುತ್ತಲ್ಲ, ರಾಣಿ ಹಣಕ್ಕಾಗಿ ನಮ್ಮನ್ನು ಸದಾ ಪೀಡಿಸುತ್ತಿದ್ದು ಅದಕ್ಕೆ ನಿರಾಕರಿಸಿದ್ದಕ್ಕಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಮೊದಲು ಸಹಾಯಕ್ಕಾಗಿ ಇತರರಿಗೆ ಅಂಗಲಾಚಬೇಕಾಗಿದ್ದು ಪರಿವರ್ತನ ಟ್ರಸ್ಟಿಗೆ ಸೇರಿದ ಬಳಿಕ ನಮ್ಮ ಹಕ್ಕುಗಳಿಗಾಗಿ ಹೋರಾಡಲು ಧ್ಯೇರ್ಯ ಬಂದಿದೆ. ಭಾನುವಾರ ನಾನು ಟ್ರಸ್ಟಿನ ಇನ್ನೋರ್ವ ಸದಸ್ಯೆಯೊಂದಿಗೆ ಇದ್ದಾಗ ಗೂಂಡಾಗಳಿಂದ ನನ್ನ ಮೇಲೆ ಧಾಳಿಗೊಳಗಾದೆ, ಕತ್ತಲೆಯಲ್ಲಿ ಧಾಳಿ ಮಾಡಿದ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇಂತಹ ಧಾಳಿಗಳು ಸದಾ ನಡೆಯುತ್ತಿದ್ದರೆ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುವುದು. ನಮಗೆ ನ್ಯಾಯ ಬೇಕಾಗಿದೆ. ಸಮಾಜದ ವ್ಯಕ್ತಿಗಳು ನಮಗೆ ಪ್ರೋತ್ಸಾಹ ನೀಡಿದರೆ ನಾವೂ ಕೂಡ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.
ಚಂದ್ರಕಲಾ ಮತ್ತು ರೇಖಾ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಳಿಕ ಕ್ರೈಮ್ ಹಾಗೂ ಟ್ರಾಫಿಕ್ ವಿಭಾಗದ ಡಿಸಿಪಿ ಡಾ ಸಂಜೀವ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಮಂಗಳಮುಖಿಯರು ಯಾವುದೇ ಕಾರಣಕ್ಕೂ ಯಾರಿಗೂ ಹಣ ನೀಡದಂತೆ ಸಲಹೆ ನೀಡಿದರು,

ಈ ರೀತಿ ನಾವು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದೇವೆ. ಸ್ವಾಭಿಮಾನದಿಂದ ಬದುಕುವ ಪ್ರಯತ್ನವಾಗಿ ಟೈಲರಿಂಗ್ ಹಾಗೂ ಇನ್ನಿತರ ಸ್ವ ಉದ್ಯೋಗದ ತರಬೇತಿಯನ್ನು ಪಡೆಯಲು ಕೂಡ ಆರಂಭಿಸುತ್ತೇವೆ. ಸಮಾಜದಲ್ಲಿ ಈ ವರೆಗೆ ನಮಗೆ ಯಾವುದೇ ಅಸ್ತಿತ್ವವೇ ಇಲ್ಲದ ವೇಳೆಯಲ್ಲಿ ಪರಿವರ್ತನಾ ಟ್ರಸ್ಟಿನ ನೇತೃತ್ವದಲ್ಲಿ ಸ್ವಂತ ಆಧಾರ್ ಕಾರ್ಡ್ ಪಡೆಯುವ ಅವಕಾಶ ಲಭಿಸಿದ್ದು, ಇದರಿಂದ ನಮಗೆ ಒಂದು ಅಸ್ತಿತ್ವ ಲಭಿಸಿದಂತಾಗಿದೆ.

ಸ್ವ ಉದ್ಯೋಗದೊಂದಿಗೆ ಸ್ವಾಭಿಮಾನದೊಂದಿಗೆ ಬದುಕುವ ಆಸೆಯನ್ನು ಹೊಂದಿದ ನಮಗೆ ಕೆಲವೊಂದು ಮಂಗಳಮುಖಿಯರ ನಾಯಕಿ ಎನಿಸಿಕೊಂಡವರು ನಮ್ಮನ್ನು ಒತ್ತಾಯವಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ ಅಲ್ಲಿ ದುಡಿದು ನಾಯಕಿ ಎನಿಸಿಕೊಂಡವರಿಗೆ ತಿಂಗಳಿಗೆ ರೂ 6000 ಕೊಡಬೇಕೆಂದು ಇಲ್ಲವಾದರೆ ನಮ್ಮನ್ನು ಮಂಗಳೂರಿನಲ್ಲಿ ಜೀವಿಸಲು ಬಿಡುವುದಿಲ್ಲ ಎಂಬ ಬೆದರಿಕೆಯನ್ನು ಹಾಕಿದ್ದಾರೆ. ನಾವು ಕಷ್ಟಪಟ್ಟು, ಭಿಕ್ಷೆ ಬೇಡಿ, ಲೈಂಗಿಕ ಕಾರ್ಯಕರ್ತೆಯರಾಗಿ ದುಡಿದ ಹಣವನ್ನು ನಾವು ಅವರಿಗೆ ಯಾಕೆ ನೀಡಬೇಕು. ನಾವು ಹಣಕೊಡಲು ಒಪ್ಪದಾಗ ನಮಗೆ ಹೊಡೆಸಲು ತುಂಬಾ ಸಾರಿ ಜನರನ್ನು ಕಳುಹಿಸಿದ್ದರು ಆದರೆ ನಾವು ತಪ್ಪಿಸಿಕೊಂಡೆವು. ಈಗ ನಮಗೆ ಪರಿವರ್ತನಾ ಟ್ರಸ್ಟ್ ತುಂಬಾ ಸಹಾಯ ಮಾಡುತ್ತಿದೆ. ನಮ್ಮ ಕೋರ್ಸ್ ಮುಗಿದ ಮೇಲೆ ನಾವು ಸಹ ಇತರರಂತೆ ದುಡಿದು ಸಂಪಾದನೆ ಮಾಡಬೇಕೆಂಬುದೆ ನಮ್ಮ ಉದ್ದೇಶವಾಗಿದೆ. ಭಾನುವಾರ ನಮ್ಮ ಸಹಪಾಟಿ ಪ್ರೀಯ ಎಂಬವರ ಮೇಲೆ ಹಲ್ಲೆಯಾಗಿದೆ. ಅವರು ರೂ 6000 ಕೊಡಲು ನಿರಾಕರಿಸಿದ್ದರು ಅದಕ್ಕಾಗಿ ಯಾರಿಂದಲೋ ಪ್ರೀಯಾರ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ನಮಗೆ ನಗರದಲ್ಲಿ ರಕ್ಷಣೆ ಇಲ್ಲದ ಹಾಗೆ ಆಗಿದೆ, ನಾವು ಈ ಕುರಿತಂತೆ ಪಣಂಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಮ್ಮಿಂದ ವಸೂಲಿ ಮಾಡುವುದನ್ನು ನಿಲ್ಲಿಸಬೇಕಾಗಿ ನಮ್ಮ ವಿನಂತಿ

ಟ್ರಸ್ಟಿನ ಸಹಾಯದಿಂದ ಸ್ವಾಭಿಮಾನದೊಂದಿಗೆ ಬದಕು ಕಟ್ಟಿಕೊಳ್ಳಲು ಪ್ರಯತ್ನಿಸುವ ನಮಗೆ ಇಂತಹ ಕೆಲವೊಂದು ವ್ಯಕ್ತಿಗಳ ಕಿರುಕುಳದಿಂದ ನಡೆದಾಡುವುದು ಕೂಡ ಕಷ್ಟವಾಗಿದೆ. ನಮಗೆ ಸಮಾಜ, ಆಡಳಿತ ವರ್ಗ ಹಾಗೂ ಪೋಲಿಸ್ ಇಲಾಖೆಯಿಂದ ಸೂಕ್ತ ರಕ್ಷಣೆಯ ಅವಶ್ಯಕತೆ ಇದೆ ಅಲ್ಲದೆ ಇಂತಹ ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ದ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ.

ಟ್ರಸ್ಟಿನ ಸ್ಥಾಪಕಿ ಹಾಗೂ ಲೈಫ್ ಟ್ರಸ್ಟಿ ವಾಯ್ಲೆಟ್ ಪಿರೇರಾ ಮಾತನಾಡಿ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಜಿಲ್ಲಾಡಳಿತ ನಮಗೆ ಸಂಪೂರ್ಣ ಬೆಂಬಲ ಸಹಾಯ ನೀಡುತ್ತಿದ್ದು, ಟ್ರಸ್ಟಿನ ಕಚೇರಿಯಲ್ಲಿ ಅವರಿಗೆ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶ ಮಾಡಿಕೊಟ್ಟಿದೆ. ಟ್ರಸ್ಟಿನ 17 ಮಂದಿ ಸದಸ್ಯರು ಬ್ಯೂಟಿಷಿಯನ್ ಹಾಗೂ ಟೈಲರಿಂಗ್ ತರಬೇತಿಗೆ ಅರ್ಜಿ ಸಲ್ಲಿಸಿದ್ದು, ಸ್ವಾಭಿಮಾನಿಯಾಗಿ ಬದುಕಲು ಪ್ರಯತ್ನಿಸುತ್ತಿದ್ದಾರೆ ಎಂದರು. ಮಂಗಳಮುಖಿಯರಿಗೆ ಸಮಾಜದ ನಾಗರಿಕರ ಬೆಂಬಲ ಅಗತ್ಯವಿದ್ದು, ಮಂಗಳ ಮುಖಿಯರನ್ನು ಮನುಷ್ಯರಂತೆ ಗೌರವಿಸಬೇಕಾಗಿದೆ ಎಂದರು


Spread the love