ಹತ್ಯೆಗಾರರನ್ನು ದೇಶಭಕ್ತರೆನ್ನುವ ಬಿಜೆಪಿ ಹೇಳಿಕೆ ಖಂಡನೀಯ – ಉಡುಪಿ ಜಿಲ್ಲಾ ಕಾಂಗ್ರೆಸ್

ಹತ್ಯೆಗಾರರನ್ನು ದೇಶಭಕ್ತರೆನ್ನುವ ಬಿಜೆಪಿ ಹೇಳಿಕೆ ಖಂಡನೀಯ – ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ರಾಜೀವ ಗಾಂಧಿಯವರು ದೇಶದ ಐಕ್ಯತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರೆ, ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂತಹವರನ್ನು ಕೊಂದ ಗೋಡ್ಸೆಯನ್ನು ದೇಶಭಕ್ತರೆಂದು ಬಿಂಬಿಸುವ ಬಿಜೆಪಿ ಚಿಂತನೆ ಅಪಾಯಕಾರಿ ಬೆಳವಣಿಗೆ. ನಾಥೂರಾಮ್ ಗೋಡ್ಸೆ, ಅಜ್ಮಲ್ ಕಸಬ್‍ರೊಂದಿಗೆ ಹೋಲಿಕೆ ಮಾಡಿ ರಾಜೀವ್ ಗಾಂಧಿಯನ್ನು ಕ್ರೂರ ಕೊಲೆಗಾರರೆಂದು ಬಿಂಬಿಸಿದ ನಳಿನ್ ಕುಮಾರ್ ಕಟೀಲ್‍ರಂತವರ ಸಂಖ್ಯೆ ಮತ್ತು ಅವರಂತಹ ವಿಚಾರಧಾರೆ ಇತ್ತೀಚಿಗೆ ಹೆಚ್ಚುತ್ತಿರುವುದರಿಂದ ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಮಾರಕವಾಗಿ ಪರಿಣಮಿಸಬಹುದು. ಭೋಪಾಲ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ನಾಥೂರಾಮ್ ಗೋಡ್ಸೆ ಭಯೋತ್ಪಾದಕನಲ್ಲ ಅವನೊಬ್ಬ ದೇಶಭಕ್ತ ಎನ್ನುವ ಹೇಳಿಕೆ ಹಾಗೂ ಗೋಡ್ಸೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ವಕ್ತಾರ ಅನಿಲ್ ಸೌಮಿತ್ರರವರ ಹೇಳಿಕೆಗಳು ದೇಶದ ಅಖಂಡತೆಗೆ ದಕ್ಕೆಯಾಗುವ ಹೇಳಿಕೆಗಳಾಗಿದೆ. ಇದನ್ನು ದೇಶದ ಜನತೆ ಗಂಬೀರವಾಗಿ ಪರಿಗಣಿಸಬೇಕಾಗಿದೆ.

ಪದೇ ಪದೇ ವಿವಾದಾತ್ಮಕ ಹಾಗೂ ಜನ ವಿರೋಧಿ ಹೇಳಿಕೆಗಳ ಮೊರೆ ಹೋಗುತ್ತಿರುವ ಬಿಜೆಪಿ ಮುಖಂಡರುಗಳ ನಡವಳಿಕೆ ರಾಷ್ಟ್ರಪಿತನೆಂದೇ ದೇಶವೇ ಗೌರವಿಸುವ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆಯು ದೇಶ ಭಕ್ತನಾದರೆ ಈ ದೇಶದ ಎಲ್ಲಾ ಉಗ್ರರು ದೇಶ ಭಕ್ತರಾಗುತ್ತಾರೆ. ಇದೊಂದು ಕ್ಷಮಿಸಲಾರದ ಅಪರಾಧವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶ ಗಾಂಧೀಜಿಯವರ ಹೆಸರಲ್ಲಿ ಗುರುತಿಸಿ ಕೊಳ್ಳಬೇಕೋ ಅಥವಾ ನಾಥೂರಾಮ್ ಗೋಡ್ಸೆ ಹೆಸರಲ್ಲೇ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಜನರ ಮೇಲಿದೆ. ಹತ್ಯೆಗಳನ್ನು ಬೆಂಬಲಿಸುವ ಬಿಜೆಪಿ ಮುಖಂಡರನ್ನು ಜನತೆ ಬೆಂಬಲಿಸುವುದೇ ದೇಶಕ್ಕೆ ಅಪಮಾನ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧಿಯನ್ನು ಟೀಕಿಸುವ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಇವತ್ತು ಸಂಸದರಾಗಿರುವುದಕ್ಕೆ ಮಹಾತ್ಮಾ ಗಾಂಧಿಯೇ ಕಾರಣ.

ಬಿಜೆಪಿ ಮಹಾತ್ಮಾ ಗಾಂಧಿಯ ಬಗ್ಗೆ ಕಿಂಚಿತ್ ಅಭಿಮಾನ ಇದ್ದಲ್ಲಿ ಈ ರೀತಿಯ ದೇಶದ್ರೋಹದ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತದೆ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಕೊಂದಿರುವ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿ ನಾಯಕರು ವೈಭವೀಕರಿಸುವುದು ಅತ್ಯಂತ ಖಂಡನೀಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notify of

Maha kai bhaktara gamanakke.

Modi led NDA winning with Tsunami.