ಹಿಂದೂ ಯುವಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಗಡಿಪಾರು ಮಾಡಲು ಕಾಂಗ್ರೆಸ್ ಹುನ್ನಾರ -ಯಶ್ ಪಾಲ್ ಸುವರ್ಣ

Spread the love

ಹಿಂದೂ ಯುವಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಗಡಿಪಾರು ಮಾಡಲು ಕಾಂಗ್ರೆಸ್ ಹುನ್ನಾರ -ಯಶ್ ಪಾಲ್ ಸುವರ್ಣ

ಉಡುಪಿ: ಪೊಲೀಸ್ ಇಲಾಖೆಯನ್ನು ಬಳಸಿ ಹಿಂದೂ ಸಮಾಜವನ್ನು ದಮನಿಸುವ ಕೃತ್ಯಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದು ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸಿನ ಶವ ಪೆಟ್ಟಿಗೆಗೆ ಜಡಿಯಲ್ಪಡುವ ಕೊನೆಯ ಮೊಳೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಇತಿಹಾಸ ಕಂಡ ಅತ್ಯಂತ ಕೆಟ್ಟ ಆಡಳಿತವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನತೆಗೆ ಕರುಣಿಸಿದೆ. ಒಂದು ಕಡೆ ಹಿಂದೂ ಯುವಕರನ್ನು ಮತಾಂಧ ಶಕ್ತಿಗಳು ರಾಜಾರೋಷವಾಗಿ ಹತ್ಯೆಗೈಯುತ್ತಿದ್ದರೆ ಇನ್ನೊಂದೆಡೆ ಆ ಪಾತಕಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿ ಇನ್ನಷ್ಟು ಹತ್ಯೆಗೆ ಪ್ರಚೋದಿಸುವ ಕಾರ್ಯವನ್ನು ಸ್ವತಃ ಸರ್ಕಾರವೇ ಮಾಡುತ್ತಿದೆ. ಕೋಮು ಗಲಭೆ ನಡೆಸಿ ಅಮಾಯಕರ ಸಾವುನೋವಿಗೆ ಕಾರಣರಾದ ಸಮಾಜಘಾತುಕ ಮುಸ್ಲಿಂ ಮತೀಯವಾದಿ ಶಕ್ತಿಗಳಿಗೆ ಸಿದ್ದರಾಮಯ್ಯ ಬಿಡುಗಡೆಭಾಗ್ಯ ಒದಗಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಇಲಾಖೆಯನ್ನೇ ಕಾಂಗ್ರೆಸಿಗರು  ಓಟಿಗೆ ಬೇಕಾಗಿ ದುರುಪಯೋಗ ಪಡಿಸಿಕೊಂಡು ಇಂಥಹ ಕೃತ್ಯ ನಡೆಸುತ್ತಿರುವುದು ನಿಜಕ್ಕೂ ನಾಚಿಕೆಗೇಡು.

ಕಾಂಗ್ರೆಸಿನ ಈ ಸಮಾಜ ಒಡೆಯುವ ಓಲೈಕೆ ನೀತಿಯ ವಿರುದ್ಧ ಹೋರಾಡುತ್ತಿರುವ ಸಂಘಪರಿವಾರವನ್ನು ಧಮನಿಸಲು ಪೊಲೀಸ್ ಅಧಿಕಾರಿಗಳು ಕಾಂಗ್ರೆಸಿಗರಿಂದ ಸುಪಾರಿ ಪಡೆದಂತೆ ಕಂಡುಬರುತ್ತಿದೆ.  ಚುನಾವಣೆಗೆ ಮೊದಲು ಸಂಘಪರಿವಾರದ ಪ್ರಮುಖ ಕಾರ್ಯಕರ್ತರನ್ನು ರೌಡಿ ಲಿಸ್ಟಿಗೆ ಸೇರಿಸಿ ಜಿಲ್ಲೆಯಿಂದ ಗಡಿಪಾರು ಮಾಡಿಸುವ ಹುನ್ನಾರ ತೆರೆಮರೆಯಲ್ಲಿ ನಡೆಯುತ್ತಿದೆ.ಪ್ರತಿಭಟನೆಯಲ್ಲಿ ಭಾಗವಹಿಸಿದರು ಎಂಬ ಕಾರಣಕ್ಕಾಗಿ ರಾತ್ರಿ ಹೊತ್ತು ಮನೆಗೆ ನುಗ್ಗಿ ಹಿಂದೂ ಕಾರ್ಯಕರ್ತರನ್ನು ಈ ಪೊಲೀಸರು ಎಳೆದೊಯ್ದ ಉದಾಹರಣೆ ಇದೆ. ಆದರೆ ಉತ್ತರ ಕನ್ನಡವನ್ನೇ ಬೆಚ್ಚಿ ಬೀಳಿಸಿದ್ದ ಪರೇಶ್ ಮೇಸ್ತ ಹತ್ಯೆ ಆರೋಪಿಗಳನ್ನು ಬಂಧಿಸುವುದರಲ್ಲಿ ಈ ಪೊಲೀಸರಿಗೆ ಯಾವ ಆಸಕ್ತಿಯೂ ಇಲ್ಲ.  ಬೈಂದೂರಿನಲ್ಲಿ ಶಾಸಕ ಗೋಪಾಲ್ ಪೂಜಾರಿ ಕುಮ್ಮಕ್ಕಿನಿಂದ ಗಂಗೊಳ್ಳಿ ಪರಿಸರದ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ. ಕಾಪು ಮುದರಂಗಡಿಯ ಹಿಂದೂ ಸಂಘಟನೆಯ ಯುವಕರನ್ನು ವಿನಾಕಾರಣ ಠಾಣೆಗೆ ಕರೆಸಿ ಪರೇಡ್ ನಡೆಸುವ ಮೂಲಕ ಆ ಯುವಕರನ್ನೂ ರೌಡಿಪಟ್ಟಿಗೆ ಸೇರಿಸಲು ಪೊಲೀಸರು ಮುಂದಾಗಿದ್ದಾರೆ. ಕಾನೂನು ಉಲ್ಲಂಘೀಸಿ ಕಟ್ಟಲಾಗುತ್ತಿರುವ ಅಕ್ರಮ ಮಸೀದಿ ನಿರ್ಮಾಣವನ್ನು ಪ್ರಶ್ನಿಸಿದರು ಎಂಬ ಏಕೈಕ ಕಾರಣಕ್ಕಾಗಿ ಈ ಯುವಕರ ಮೇಲೆ ಕಾಂಗ್ರೆಸ್ ದ್ವೇಷ ಸಾಧನೆ ಮಾಡುತ್ತಿದೆ. ಈ ಯುವಕರ ಬಂಧನದ  ಹಿಂದೆ ಸ್ಥಳಿಯ ಶಾಸಕ ವಿನಯ್ ಕುಮಾರ್ ಸೊರಕೆ ಕೈವಾಡವಿದೆ.

ರಾಜ್ಯದ ಪೊಲೀಸರು ಖಾಕಿಧಾರಿ ಕಾಂಗ್ರೆಸ್ ಕಾರ್ಯಕರ್ತರಾಗಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಕೆಲವು ಪೊಲೀಸ್ ಅಧಿಕಾರಿಗಳಿಗೆ ರಾಜಕೀಯದಲ್ಲಿ ವಿಶೇಷ ಅಭಿರುಚಿ ಇದ್ದರೆ ತಮ್ಮ ಹುದ್ದೆಯನ್ನು ಬಿಟ್ಟು ಖಾಕಿ ಕಳಚಿ ರಾಜಕೀಯಕ್ಕೆ ಬಂದು ಬಿಡಲಿ. ಆಯಕಟ್ಟಿನ ಸ್ಥಳದಲ್ಲಿ ಕುಳಿತುಕೊಂಡು ರಾಜಕೀಯ ಪುಡಾರಿಗಳ ಬಾಡಿಗೆ ಬಂಟರಂತೆ ಕೆಲಸ ಮಾಡುವುದು ಸರಿಯಲ್ಲ.  ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಅಧಿಕಾರಶಾಹಿಗಳು ತಮ್ಮ ದಬ್ಬಾಳಿಕೆಯನ್ನು ಕೂಡಲೆ ನಿಲ್ಲಿಸಬೇಕು ತುಷ್ಟೀಕರಣದ ಕೆಟ್ಟಚಾಳಿಯನ್ನು ಇದೇ ರೀತಿ ಮುಂದುವರಿಸಿದರೆ ಕರಾವಳಿಯಾದ್ಯಂತ ಬೃಹತ್ ಮಟ್ಟದ ಹೋರಾಟವನ್ನು ಸಂಘಟಿಸಿ ಸಹಸ್ರಾರು ಕಾರ್ಯಕರ್ತರನ್ನು ಬೀದಿಗಿಳಿಸಲಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿನ ಅವಶೇಷವೂ ಸಿಗದಂತೆ ಗುಡಿಸಿ ಹಾಕಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.


Spread the love