ಹುತಾತ್ಮ ಯೋಧರ ಕುಟುಂಬಗಳಿಗೆ ಜಿ. ಶಂಕರ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ದೇಣಿಗೆ

Spread the love

ಹುತಾತ್ಮ ಯೋಧರ ಕುಟುಂಬಗಳಿಗೆ ಜಿ. ಶಂಕರ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ದೇಣಿಗೆ

ಉಡುಪಿ :ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಲಾಯಿತು.

ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಸಮಾನ ಮನಸ್ಕ ಸಂಘ ಸಂಸ್ಥೆಗಳು, ವಿವಿಧ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಲಾದ ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಟ್ರಸ್ಟಿನ ಪ್ರವರ್ತಕರಾದ ಜಿ. ಶಂಕರ್ ಅವರು ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ 25 ಲಕ್ಷ ರೂ ಮೊತ್ತದ ಚೆಕ್ಕನ್ನು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಜಿ ಶಂಕರ್ ಅವರು ಟ್ರಸ್ಟ್ ವತಿಯಿಂದ ನೀಡಿದ ಹಣ ಸಮರ್ಪಕವಾಗಿ ಬಳಕೆ ಆಗುವಂತೆ ಮತ್ತು ನೇರವಾಗಿ ಸಂತ್ರಸ್ತ ಯೋಧರ ಕುಟುಂಬಕ್ಕೆ ಸಿಗುವಂತೆ ಮಾಡಬೇಕಾಗಿದೆ. ನಾವು ನೀಡಿದ್ದನ್ನು ತೃಪ್ತಿಕರವಾಗಿ ಆ ಕುಟುಂಬಗಳಿಗೆ ಮುಟ್ಟಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾತನಾಡಿ ಟ್ರಸ್ಟ್ ವತಿಯಿಂದ ನೀಡಿರುವ ದೇಣಿಗೆಯನ್ನು ಹುತಾತ್ಮ ಯೋಧರ ಕುಟಂಬಗಳಿಗೆ ಸರಕಾರದ ಪರವಾಗಿ ತಲುಪಿಸುವ ಸಲುವಾಗಿ ಚೆಕ್ಕನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿಕೊಡಲಾಗುವುದು ಎಂದರು.

ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಉಡುಪಿ ಡಿವೈಎಸ್ಪಿ ಜೈಶಂಕರ್, ವಿದ್ಯಾರ್ಥಿನಿ ಸಮೀನ, ಯೋಧರಾದ ತಾರನಾಥ್, ಉಮೇಶ್ ಸುವರ್ಣ, ಸುರೇಶ್ ಬಾರ್ಕೂರು, ಬಾಲರಾಜ್ ಪಿತ್ರೋಡಿ ನುಡಿ ನಮನ ಸಲ್ಲಿಸಿದರು.

ಸಹಸ್ರಾರು ಸಂಖ್ಯೆಯಲ್ಲಿ ನೆರೆದ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಮೊಂಬತ್ತಿ ಹತ್ತಿಸಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಸಿದರು.


Spread the love