ಹುಸೇನಬ್ಬ ಅನುಮಾನಾಸ್ಪದ ಸಾವು : ತಲೆಗೆ ಹೊಡೆದು ಕೊಲೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ

Spread the love

ಹುಸೇನಬ್ಬ ಅನುಮಾನಾಸ್ಪದ ಸಾವು : ತಲೆಗೆ ಹೊಡೆದು ಕೊಲೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ

ಉಡುಪಿ: ಬಳಿ ಜೋಕಟ್ಟೆ ದನದ ವ್ಯಾಪಾರಿ ಹುಸೇನಬ್ಬ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷಾ ವರದಿಯನ್ನು ಪ್ರಕರಣದ ತನಿಖಾಧಿಕಾರಿಗಳು ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ಹುಸೇನಬ್ಬರ ಸಾವಿಗೆ ತಲೆಗೆ ಆಗಿರುವ ಗಾಯವೇ ಕಾರಣ ಎಂದು ಹೇಳಲಾಗಿದೆ.

ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಗೆ ಸಂಬಂಧಿಸಿ ನ್ಯಾಯಾಲಯವು ಹುಸೇನಬ್ಬ ಸಾವಿನ ಮರಣೋತ್ತರ ಪರೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರಕರಣದ ತನಿಖಾಧಿಕಾರಿಗಳಿಗೆ ಜೂ.13ರಂದು ನೋಟೀಸು ಜಾರಿ ಮಾಡಿತ್ತು. ಅದರಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ ಸೋನಾವಣೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವರ ಮೂಲಕ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಟಿ. ಅವರಿಗೆ  ವರದಿ ಸಲ್ಲಿಸಿದರು.

ಮಣಿಪಾಲ ಆಸ್ಪತ್ರೆಯ ವೈದ್ಯರು ನೀಡಿದ ಈ ವರದಿಯಲ್ಲಿ ಹುಸೇನಬ್ಬರ ಸಾವಿಗೆ ತಲೆಯಲ್ಲಿ ಆಗಿರುವ ಗಾಯವೇ ಕಾರಣ ಎಂದು ಉಲ್ಲೇಖಿಸಲಾಗಿದೆ. ಇದರಿಂದ ಹುಸೇನಬ್ಬರ ತಲೆಗೆ ಹೊಡೆದು ಕೊಲೆ ಮಾಡಿರುವುದು ದೃಢಪಟ್ಟಿದೆ. ಇದೊಂದು ಕೊಲೆ ಎಂಬುದನ್ನು ಪೊಲೀಸ್ ಮೂಲಗಳು ಕೂಡ ಸ್ಪಷ್ಟಪಡಿಸಿವೆ. ಮೃತರ ರಕ್ತದ ಗುಂಪು ಸೇರಿದಂತೆ ಇತರ ಪರೀಕ್ಷೆಗಳ ವಿಧಿ ವಿಜ್ಞಾನದ ಪ್ರಯೋಗಾಲಯದ ವರದಿಯು ಇನ್ನು ಎರಡು ಮೂರು ತಿಂಗಳಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಜೂ. 18ರಂದು ಆದೇಶ: ಪ್ರಕರಣದ ಆರೋಪಿಗಳಾದ ಹಿರಿಯಡ್ಕ ಎಸ್ಸೈ ಸೇರಿದಂತೆ ಮೂವರು ಪೊಲೀಸರು ಹಾಗೂ ಏಳು ಮಂದಿ ಬಜರಂಗದಳ ಕಾರ್ಯಕರ್ತರ ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿ, ಇಂದು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅಂತಿಮ ಆದೇಶವನ್ನು ಜೂ.18ರಂದು ನೀಡುವುದಾಗಿ ಪ್ರಕಟಿಸಿದರು.

ಮೇ 30ರಂದು ಪೆರ್ಡೂರು ಬಳಿ ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ಸಾಗಿಸುತ್ತಿದ್ದ ವೇಳೆ ವಾಹನವನ್ನು ತಡೆದು ಹುಸೇನಬ್ಬ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಅವರು ಸಮೀಪದ ಹಿರಿಯಡಕ ಠಾಣೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದರು.

ಬಜರಂಗದಳದ ಕಾರ್ಯಕರ್ತರು ಹುಸೇನಬ್ಬ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಸಹೋದರ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಹಿರಿಯಡಕ ಠಾಣೆ ಪಿಎಸ್‌ಐ ಡಿ.ಎನ್.ಕುಮಾರ್, ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಇದ್ದರು.


Spread the love