ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನಕ್ಕೆ ಮನವಿ: ಸಚಿವ ಕೆ.ಎಚ್. ಮುನಿಯಪ್ಪರಿಂದ ಭರವಸೆ
ಮಂಗಳೂರು: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಸುರತ್ಕಲ್ ಹೋಬಳಿಯ ಕುಂಜತ್‌ಬೈಲ್ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹5 ಕೋಟಿ ಅನುದಾನ ನೀಡುವಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದ ನಿಯೋಗವು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಸಂಘದ ಅಧ್ಯಕ್ಷ ರಘುನಾಥ್ ಅತ್ತಾವರ, ಸಂಜೀವ ಕೋಟ್ಯಾನ್, ಆನಂದ್ ಅತ್ತಾವರ, ಈಶ್ವರ್, ಅವಿನಾಶ್ ಕುಂಜತ್‌ಬೈಲ್ ಹಾಗೂ ಪ್ರಶಾಂತ್ ಸೇರಿದಂತೆ ನಿಯೋಗದ ಸದಸ್ಯರು ಸಚಿವರನ್ನು ಭೇಟಿ ಮಾಡಿ, ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಅಂಬೇಡ್ಕರ್ ಭವನದಲ್ಲಿ ಭವ್ಯ ಸಭಾಂಗಣ, ಮಿನಿ ಹಾಲ್, ಸಹಕಾರಿ ಸಂಘದ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕೇಂದ್ರ, ಮಹಿಳಾ ಘಟಕದ ಕಚೇರಿ, ಕುಲದೈವ ಅಧ್ಯಯನ ಕೇಂದ್ರ ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶವಿದ್ದು, ಇದು ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಐವನ್ ಡಿ’ಸೋಜಾ ಅವರು ಸಚಿವರ ಗಮನಕ್ಕೆ ತಂದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆ.ಎಚ್. ಮುನಿಯಪ್ಪ ಅವರು, ಮುಂದಿನ 15 ದಿನಗಳೊಳಗೆ ಈ ಕುರಿತು ತೀರ್ಮಾನ ಕೈಗೊಂಡು ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.
ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿರುವ ಈ ಮಹತ್ವದ ಯೋಜನೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತಸ ತಂದಿದೆ ಎಂದು ಐವನ್ ಡಿ’ಸೋಜಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಿಯೋಗದ ಸದಸ್ಯರು ಸಚಿವರಿಗೆ ಧನ್ಯವಾದ ಸಲ್ಲಿಸಿದರು.












