ಅತ್ಯಾಚಾರ , ಕೊಲೆ ಆರೋಪಿ ಬಂಧಿಸುವಲ್ಲಿ ಸಹಕರಿಸಿದ ಸಾರ್ವಜನಿಕರಿಗೆ ಪೊಲೀಸರಿಂದ ಸನ್ಮಾನ

Spread the love

ಅತ್ಯಾಚಾರ, ಕೊಲೆ ಆರೋಪಿ ಬಂಧಿಸುವಲ್ಲಿ ಸಹಕರಿಸಿದ ಸಾರ್ವಜನಿಕರಿಗೆ ಪೊಲೀಸರಿಂದ ಸನ್ಮಾನ

ಉಡುಪಿ : ಮಣಿಪಾಲ ಠಾಣೆಯ ಕೊಲೆ ಮತ್ತು ಪೋಕ್ಸೋ ಕಾಯ್ದೆ ಪ್ರಕರಣದ ಆರೋಪಿ ಹನುಮಂತ ಬಸಪ್ಪ ಕಂಬಳಿ ಎಂಬಾತನು ಮಾರ್ಚ್ 31 ರಂದು ಮಣಿಪಾಲ ಠಾಣಾ ಸಿಬ್ಬಂದಿಗಳ ಬೆಂಗಾವಲಿನಲ್ಲಿ ಸಂಜೆ ವೇಳೆ ಹಿರಿಯಡ್ಕ ಕಾರಾಗೃಹಕ್ಕೆ ತರುವ ವೇಳೆಯಲ್ಲಿ ಆರೋಪಿಯು ವಾಹನದಿಂದ ಜಿಗಿದು ಅಲ್ಲಿಯೇ ಕಾಡಿನಲ್ಲಿ ಪರಾರಿಯಾಗಿದ್ದು, ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವ ವೇಳೆ ಈತನ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಐಪಿಎಸ್, ಉಡುಪಿ ಜಿಲ್ಲೆರವರು ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮಾರ್ಚ್ 31ರ ರಾತ್ರಿಯಿಂದಲೇ ಹಗಲಿರುಳು ಆರೋಪಿತನ ಪತ್ತೆಗೆ ಕಾರ್ಯಾಚರಣೆಯನ್ನು ನಡೆಸಿದ್ದು, ಈ ವೇಳೆಗೆ ಹಿರಿಯಡ್ಕ ಠಾಣಾ ಸರಹದ್ದಿನ ಸಾರ್ವಜನಿಕರೂ ಕೂಡಾ ಪೊಲೀಸ್ ಇಲಾಖೆಯೊಂದಿಗೆ ರಾತ್ರಿ ಹಗಲು ಆರೋಪಿತನ ಪತ್ತೆ ಬಗ್ಗೆ ಶ್ರಮಿಸಿದ್ದು, ಆರೋಪಿತನ ಜಾಡು ಹಿಡಿದು ಪತ್ತೆ ಮಾಡುವಲ್ಲಿ ಸಹಕರಿಸಿದ ಸಾರ್ವಜನಿಕರಿಗೆ ಅಭಿನಂದನಾ ಸಮಾರಂಭವನ್ನು ಏಪ್ರಿಲ್ 5ರಂದು ಹಿರಿಯಡ್ಕ ಮಾಧವ ಮಂಗಲ ಸಭಾ ಭವನದಲ್ಲಿ ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಐಪಿಎಸ್ ರವರು ವಹಿಸಿದ್ದು, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಜೈ ಶಂಕರ್ ರವರು ಸ್ವಾಗತಿಸಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾರ್ವಜನಿಕರ ಸಹಕಾರವನ್ನು ಹೊಗಳಿ, ಇನ್ನು ಮುಂದಕ್ಕೂ ಸಹ ಇದೇ ರೀತಿ ಮಾಹಿತಿ ನೀಡಿ ಪೊಲೀಸ್‌ ಇಲಾಖೆಗೆ ಸಹಕರಿಸುವಂತೆ ಕೋರಿದರು.

ಸಾರ್ವಜನಿಕರ ಪರವಾಗಿ ಕೃಷ್ಣ ಪ್ರಸಾದ್ ಶೆಟ್ಟಿ ಮತ್ತು ಕೃಷ್ಣ ಕುಲಾಲ್ ರವರು ಮಾತನಾಡಿ ಪೊಲೀಸ್ ಇಲಾಖೆಯ ಅಭಿನಂದನಾ ಸಮಾರಂಭ ಕ್ಕೆ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.

ಪೊಲೀಸ್ ಅಧೀಕ್ಷಕರು ಶ್ರೀಲತಾ ಮತ್ತು ಪುಷ್ಪಲತಾರರವರನ್ನು ಸನ್ಮಾನಿಸಿ, ಸಹಕರಿಸಿದ ಇತರ ಸಾರ್ವಜನಿಕರಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿ, ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಸಾರ್ವಜನಿಕರ ಸಹಕಾರವನ್ನು ಸ್ಮರಿಸಿ, ಈ ರೀತಿಯ ಸಾರ್ವಜನಿಕರ ಸಹಕಾರ ಪ್ರತಿಯೊಬ್ಬನಿಗೂ ಮಾದರಿಯಾಗಿದ್ದು, ಇದೊಂದು ಅಪರಾಧವನ್ನು ತಡೆಗಟ್ಟಲು ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿದೆ, ಮುಂದೆಯೂ ಎಲ್ಲಾ ರೀತಿಯಲ್ಲಿ ಪೊಲೀಸ್‌ ಇಲಾಖೆಗೆ ಸಹಕಾರ ನೀಡುವಂತೆ ಕೋರಿದರು.

ಕೆ.ಸಿ ಪೂವಯ್ಯ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರವರು ವಂದನಾರ್ಪಣೆಗೈದರು. ಪ್ರಕಾಶ್ ಶೆಟ್ಟಿ, ಅಧ್ಯಾಪಕರು ನಿಟ್ಟೂರು ಕಾರ್ಯಕ್ರಮ ನಿರೂಪಣೆ ನಿರ್ವಹಿಸಿದರು. ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ / ಸಿಬ್ಬಂದಿಯವರು ಮತ್ತು ನಾಗರಿಕರು ಉಪಸ್ಥಿತರಿದ್ದರು.


Spread the love