ಅತ್ಯಾಚಾರ ಪ್ರಕರಣ| ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ
ಬೆಂಗಳೂರು: ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
376(2)(ಕೆ) ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಹಾಗೂ 5 ಲಕ್ಷ ರೂ. ದಂಡ, 376(2)(ಎನ್) ಅಪರಾಧಕ್ಕೆ ಜೀವನ ಪರ್ಯಂತ ಸೆರೆವಾಸ ಹಾಗೂ 5 ಲಕ್ಷ ರೂ. ದಂಡ ವಿಧಿಸಿರುವ ನ್ಯಾಯಾಲಯ, ಪ್ರಜ್ವಲ್ ರೇವಣ್ಣಗೆ ಗರಿಷ್ಠ ಶಿಕ್ಷೆ ವಿಧಿಸಿದೆ. ಜತೆಗೆ, ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರವನ್ನು ನ್ಯಾಯಾಲಯ ಘೋಷಿಸಿದೆ.
ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಶುಕ್ರವಾರ ತೀರ್ಪು ನೀಡಿ, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಪ್ರಕರಣದ ಹಿನ್ನೆಲೆ:
2024ರ ಲೋಕಸಭೆ ಚುನಾವಣೆಯ ಸಂದರ್ಭ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಸಂಸದನಾಗಿದ್ದ ಪ್ರಜ್ವಲ್ರದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ಹಲವು ವಿಡಿಯೊಗಳಿರುವ ಪೆನ್ ಡ್ರೈವ್ ಭಾರೀ ಸದ್ದು ಮಾಡಿತ್ತು. ಈ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದವು. ಈ ವೀಡಿಯೊಗಳ ಪೈಕಿ 48 ವರ್ಷದ ಮೈಸೂರಿನ ಕೆ.ಆರ್. ನಗರದ ಸಂತ್ರಸ್ತೆಯೊಬ್ಬರು ಪೊಲೀಸ್ ದೂರು ನೀಡಿದ್ದರು. ಈ ಸಂಬಂಧ ಪ್ರಜ್ವಲ್ ವಿರುದ್ಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ, ಭಾರತೀಯ ದಂಡ ಸಂಹಿತೆ–1860ರ ಕಲಂ 376(2)(ಕೆ), 376(2) (ಎನ್), 354(ಎ)(ಬಿ)(ಸಿ), 506, 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66(ಇ) ಅಡಿ ಎಫ್ಐಆರ್ ದಾಖಲಾಗಿತ್ತು.
ಕ್ರಿಮಿನಲ್ ದೂರು ದಾಖಲಿಸಿ ಕೊಂಡು ಪ್ರಕರಣವನ್ನು ಭೇದಿಸಿದ್ದ ವಿಶೇಷ ತನಿಖಾ ತಂಡದ (ಎಸ್ಐಟಿ) ಪೊಲೀಸರು ಸಂತ್ರಸ್ತೆಯು ತೋಟದ ಮನೆಯೊಂದರಲ್ಲಿ ಇದ್ದ ಜಾಡನ್ನು ಪತ್ತೆ ಹಚ್ಚಿದ್ದರು. ವಿಚಾರಣೆ ವೇಳೆ ಸಂತ್ರಸ್ತೆಯು, ‘ಪ್ರಜ್ವಲ್ ನನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ಅತ್ಯಾಚಾರ ಮಾಡಿದ್ದಾರೆ’ ಎಂದು ಆರೋಪಿಸಿದ್ದರು.
ಈ ಸಂಬಂಧ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ, ಭಾರತೀಯ ದಂಡ ಸಂಹಿತೆ–1860ರ ಕಲಂ 376(2)(ಕೆ), 376(2) (ಎನ್), 354(ಎ)(ಬಿ)(ಸಿ), 506, 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66(ಇ) ಅಡಿ ಎಫ್ಐಆರ್ ದಾಖಲು ಮಾಡಲಾಗಿತ್ತು. ತನಿಖೆಗೆ ಎಸ್ಐಟಿ ರಚಿಸಲಾಗಿತ್ತು. ಬಳಿಕ ಸಂತ್ರಸ್ತೆಯನ್ನು ಸಕ್ಷಮ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್ಪಿಸಿ) ಕಲಂ 164ರ ಅಡಿ ಹೇಳಿಕೆ ದಾಖಲು ಮಾಡಿಸಲಾಗಿತ್ತು.
ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದರು. ಅವರ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. 2024ರ ಮೇ 31ರಂದು ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಜ್ವಲ್ ರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.
ತನಿಖೆ ನಡೆಸಿದ್ದ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಅಂದಾಜು 2 ಸಾವಿರ ಪುಟಗಳ ಆರೋಪ ಪಟ್ಟಿಯನ್ನು ಕಳೆದ ವರ್ಷಾಂತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಜ್ವಲ್ ಮೊದಲ ಬಾರಿಗೆ ಸಂತ್ರಸ್ತೆಯ ಮೇಲೆ ಹಾಸನದ ಗನ್ನಿಗಢ ತೋಟದ ಮನೆ, ಆನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ರೇವಣ್ಣ ಅವರ ನಿವಾಸದಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು ಎಂದು ಆರೋಪಿಸಲಾಗಿತ್ತು.
ಪ್ರಜ್ವಲ್ ವಿರುದ್ದ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಷ್ಟೇ ನ್ಯಾಯಾಲಯದ ವಿಚಾರಣೆ ಪೂರ್ಣಗೊಳಿಸಿದೆ.