ಅನಧಿಕೃತ ಕಟ್ಟೆ–ಧ್ವಜ ಅಳವಡಿಕೆ ಪ್ರಕರಣ: ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ಪುತ್ತೂರು: ಪುತ್ತೂರು ತಾಲೂಕು ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್ ಸಮೀಪ ಸಾರ್ವಜನಿಕ ರಸ್ತೆಗೆ ಹೊಂದಿಕೊಂಡು ಅನಧಿಕೃತವಾಗಿ ಕಟ್ಟೆ ನಿರ್ಮಿಸಿ, ಅದಕ್ಕೆ ಧಾರ್ಮಿಕ ಧ್ವಜ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ಪಿರ್ಯಾದಿದಾರರು ಪುತ್ತೂರು ಮುಂಡೂರು ಗ್ರಾಮ ಪಂಚಾಯತ್ತಿನ ಸರ್ಕಾರಿ ನೌಕರರಾಗಿದ್ದು, ಅವರ ಕಾರ್ಯವ್ಯಾಪ್ತಿಯ ಪ್ರದೇಶದಲ್ಲಿ 2017ರ ಸೆಪ್ಟೆಂಬರ್ ತಿಂಗಳಲ್ಲಿ ಸಾರ್ವಜನಿಕ ರಸ್ತೆಗೆ ಹೊಂದಿಕೊಂಡಂತೆ ತ್ರಿಕೋನಾಕಾರದ ಅನಧಿಕೃತ ಕಟ್ಟೆ ನಿರ್ಮಾಣವಾಗಿತ್ತು. ಆ ಸಂದರ್ಭ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಉಂಟಾಗಿ, ಸ್ಥಳಕ್ಕೆ ಭೇಟಿ ನೀಡಿದ್ದ ಪಂಚಾಯತ್ ಹಾಗೂ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ತಿಳುವಳಿಕೆ ನೀಡಿ, ಕಟ್ಟೆಯನ್ನು ತೆರವುಗೊಳಿಸುವಂತೆ ಸೂಚಿಸಿದ್ದರು.
ಆದರೆ ಕಟ್ಟೆಯನ್ನು ತೆರವುಗೊಳಿಸದೇ ಇದ್ದು, ಇತ್ತೀಚೆಗೆ ಯಾರೋ ಆರೋಪಿತರು ಅದೇ ಅನಧಿಕೃತ ಕಟ್ಟೆಯಲ್ಲಿ ಮರದ ಕಂಬವನ್ನು ನೆಟ್ಟು, ಧಾರ್ಮಿಕ ಧ್ವಜವನ್ನು ಅಳವಡಿಸಿರುವ ಬಗ್ಗೆ ದಿನಾಂಕ 16-12-2025 ರಂದು ಸಾರ್ವಜನಿಕರಿಂದ ಪಿರ್ಯಾದಿದಾರರಿಗೆ ಮಾಹಿತಿ ಲಭ್ಯವಾಯಿತು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, 2017ರಲ್ಲಿ ಗೊಂದಲ ಉಂಟಾಗಿದ್ದ ಅದೇ ರಸ್ತೆಬದಿಯಲ್ಲಿ ಕಟ್ಟೆ ನಿರ್ಮಾಣವಾಗಿದ್ದು, ಅದರ ಮೇಲೆ ಕಂಬ ಹಾಗೂ ಧ್ವಜ ಅಳವಡಿಸಿರುವುದು ದೃಢಪಟ್ಟಿತು.
ಈ ಅನಧಿಕೃತ ಕೃತ್ಯದಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದನ್ನು ಗಮನಿಸಿ, ದಿನಾಂಕ 17-12-2025 ರಂದು ಅನಧಿಕೃತ ಕಟ್ಟೆಯನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ರೀತಿಯಲ್ಲಿ ಕಟ್ಟೆ ನಿರ್ಮಿಸಿರುವವರ ವಿರುದ್ಧ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.ನಂ. 147/2025 ರಂತೆ, ಕಲಂ 270 ಬಿಎನ್‌ಎಸ್–2023 ಹಾಗೂ ಕರ್ನಾಟಕ ಓಪನ್ ಪ್ಲೇಸ್ ಡಿಸ್ಫಿಗರ್‌ಮೆಂಟ್ ಆಕ್ಟ್ 1951 ಮತ್ತು 1981ರ ಕಲಂ 3ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದಲ್ಲದೆ, 2017ರಲ್ಲಿ ಚುನಾವಣೆ ಪೂರ್ವದಲ್ಲಿ ಈ ಅನಧಿಕೃತ ಕಟ್ಟೆ ನಿರ್ಮಾಣವಾಗಿದ್ದು, ನಂತರ ಯಾವುದೇ ಹೆಚ್ಚುವರಿ ಚಟುವಟಿಕೆಗಳು ನಡೆದಿರಲಿಲ್ಲ. ಇದೀಗ ರಾಜಕೀಯ ಉದ್ದೇಶಗಳಿಂದ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ, ಆ ಅಂಶದ ಕುರಿತಾಗಿಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.













