ಆನ್ಲೈನ್ ಮೂಲಕ ನಕಲಿ ನೀಟ್ ಅಂಕಪಟ್ಟಿ ನೀಡಿ ವಂಚನೆ: ಪ್ರಕರಣ ದಾಖಲು

Spread the love

ಆನ್ಲೈನ್ ಮೂಲಕ ನಕಲಿ ನೀಟ್ ಅಂಕಪಟ್ಟಿ ನೀಡಿ ವಂಚನೆ: ಪ್ರಕರಣ ದಾಖಲು

ಉಡುಪಿ: ಉಡುಪಿ ವಿದ್ಯಾರ್ಥಿಯಿಂದ ಸಾವಿರಾರು ರೂ. ಹಣ ಪಡೆದು ಆನ್ಲೈನ್ ಮೂಲಕ ನಕಲಿ ನೀಟ್ ಅಂಕಪಟ್ಟಿ ನೀಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ನಿವಾಸಿ ರೋಷನ್ ಶೆಟ್ಟಿ ಅವರ ಮಗ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು ಇತ್ತೀಚೆಗೆ ಎನ್ಟಿಎ ಯಿಂದ ನಡೆದ ನೀಟ್ ಪರೀಕ್ಷೆಯನ್ನು ಬರೆದಿದ್ದರು. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಎಡಿಟಿಂಗ್ ಮಾಸ್ಟರ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ರಾಷ್ಟ್ರೀಯ ಮಟ್ಟದ ನೀಟ್, ಜೆಇಇ ಮತ್ತು ಸಿಬಿಎಸ್ಇ ಪರೀಕ್ಷೆಗಳ ಫಲಿತಾಂಶಗಳನ್ನು ಡಿಜಿಟಲ್ ರೂಪದಲ್ಲಿ ಬದಲಾಯಿಸುವುದು ಮತ್ತು ನಕಲಿ ಮಾಡುವುದು ಹೇಗೆ ಎಂಬ ವಿಡಿಯೋಗಳು ಇದ್ದವು.

ಈ ಯೂಟ್ಯೂಬ್ ಚಾನೆಲ್ನಲ್ಲಿ ಎರಡು ಮೊಬೈಲ್ ನಂಬ್ರ ನೀಡಲಾಗಿದ್ದು ವಿದ್ಯಾರ್ಥಿ ಆ ಮೂಲಕ ಅವರನ್ನು ಸಂಪರ್ಕಿಸಿದ್ದನು. ಆಗ ಆ ವ್ಯಕ್ತಿ ತನ್ನನ್ನು ವಿಷು ಕುಮಾರ್ ಎಂದು ಪರಿಚಯಿಸಿಕೊಂಡಿದ್ದನು. ನಂತರ ವಿದ್ಯಾರ್ಥಿಗೆ ನಕಲಿ ನೀಟ್ ಅಂಕ ಪಟ್ಟಿ ಹಾಗೂ ಓಎಂಆರ್ ನೀಡುವುದಾಗಿ ತಿಳಿಸಿ 17,000ರೂ.ಗಳನ್ನು ವರ್ಗಾಯಿಸಿ ಕೊಂಡು ಡಿಜಿಟಲ್ ಆಗಿ ನೀಟ್ ಪರೀಕ್ಷೆಯ ನಕಲಿ ಅಂಕ ಪಟ್ಟಿ ಹಾಗೂ ಓಎಂಆರ್ ಶೀಟ್ ವಾಟ್ಯಾಪ್ ಮೂಲಕ ಕಳುಹಿಸಿಕೊಟ್ಟಿದ್ದನು.

ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿದ್ಯಾರ್ಥಿಗೆ ವಂಚಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ರೋಶನ್ ಕುಮಾರ್ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


Spread the love