ಉಡುಪಿಯಲ್ಲಿ ಹೊಸ ವರ್ಷಾಚರಣೆ: ರೆಸಾರ್ಟ್‌, ಹೋಟೆಲ್‌ ಹಾಗೂ ಹೋಂಸ್ಟೇ ಮಾಲಕರಿಗೆ  ಮಾರ್ಗಸೂಚಿ

Spread the love

ಉಡುಪಿಯಲ್ಲಿ ಹೊಸ ವರ್ಷಾಚರಣೆ: ರೆಸಾರ್ಟ್‌, ಹೋಟೆಲ್‌ ಹಾಗೂ ಹೋಂಸ್ಟೇ ಮಾಲಕರಿಗೆ  ಮಾರ್ಗಸೂಚಿ

ಉಡುಪಿ, ಡಿ.24: 2026ರ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಹೋಟೆಲ್‌, ಲಾಡ್ಜ್‌, ಹೋಂಸ್ಟೇ ಹಾಗೂ ರೆಸಾರ್ಟ್‌ ಮಾಲಕರ ಸಭೆ ಬುಧವಾರ ಬೆಳಿಗ್ಗೆ 11.30ಕ್ಕೆ ಉಡುಪಿ ಟೌನ್‌ ಹಾಲ್‌ನಲ್ಲಿ ನಡೆಯಿತು. ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವದ ಐಪಿಎಸ್ ಸಭೆಯಲ್ಲಿ ಭಾಗವಹಿಸಿ, ಹೊಸ ವರ್ಷಾಚರಣೆ ವೇಳೆ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳು ಹಾಗೂ ಪಾಲಿಸಬೇಕಾದ ಕಾನೂನು ನಿಯಮಗಳ ಬಗ್ಗೆ ವಿವರಿಸಿದರು. ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಹಾಗೂ ಪಿಎಸ್ಐ ಹರೀಶ್ ಸೇನ್ ಕೂಡ ಮಾಹಿತಿ ನೀಡಿದರು.

ಸಭೆಯಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ಆದೇಶದಂತೆ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 10 ಗಂಟೆಯೊಳಗೆ ಧ್ವನಿವರ್ಧಕ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸಿ, ನಿಗದಿತ ಸಮಯದೊಳಗೆ ಎಲ್ಲಾ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕೆಂದು ಸೂಚಿಸಲಾಯಿತು. ಅಬ್ಬರದ ಸಂಗೀತ, ಫೈರ್ ಕ್ಯಾಂಪ್‌ಗಳಿಂದ ನೆರೆಹೊರೆಯವರ ಶಾಂತಿಗೆ ಧಕ್ಕೆಯಾಗಬಾರದೆಂದು ಎಚ್ಚರಿಕೆ ನೀಡಲಾಯಿತು.

ಹೋಂಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ವಾಸಿಸುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ನಿರ್ಜನ ಪ್ರದೇಶ, ಹೊರವಲಯ ಅಥವಾ ಅರಣ್ಯ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುನ್ನ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪೂರ್ವಾನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಇಂತಹ ಪ್ರದೇಶಗಳಿಗೆ ಕರೆದೊಯ್ದು ದುರ್ಘಟನೆಗಳು ಸಂಭವಿಸಿದರೆ ಹೋಂಸ್ಟೇ ಮಾಲಕರೇ ಹೊಣೆಗಾರರಾಗಲಿದ್ದು, ಕಾನೂನು ಕ್ರಮ ಜರುಗಲಿದೆ ಎಂದು ತಿಳಿಸಲಾಯಿತು.

ಅತಿಥಿಗಳ ವಾಹನಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋಂಸ್ಟೇ ಆವರಣದಲ್ಲೇ ಪಾರ್ಕಿಂಗ್ ಮಾಡಿಸಬೇಕು. ಹೋಂಸ್ಟೇಗಳಲ್ಲಿ ಯಾವುದೇ ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಹೊರ ಆವರಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕನಿಷ್ಠ ಮೂರು ತಿಂಗಳ ಬ್ಯಾಕ್‌ಅಪ್ ವ್ಯವಸ್ಥೆ ಇರಬೇಕು.

ವಿದೇಶಿ ಅತಿಥಿಗಳು ಆಗಮಿಸಿದಲ್ಲಿ ಅವರ ‘ಸಿ’ ಫಾರಂ ವಿವರಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ವಿದೇಶಿ ವಿಭಾಗಕ್ಕೆ ಸಲ್ಲಿಸಿ, ಸಂಬಂಧಿಸಿದ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯ. ಎಲ್ಲಾ ಅತಿಥಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ ಹಾಗೂ ಗುರುತಿನ ಚೀಟಿಗಳ ವಿವರಗಳನ್ನು ದಾಖಲಿಸಬೇಕು.

ಹೊಸ ವರ್ಷಾಚರಣೆಗೆ ಧ್ವನಿವರ್ಧಕ ಬಳಕೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಯಾವುದೇ ಜಾತಿ, ಧರ್ಮಗಳ ಅವಹೇಳನ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಮದ್ಯಪಾನದಿಂದ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕು. ನಿಗದಿತ ಸಮಯದೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು.

ವಿದೇಶಿಗರು ಕೆಲಸ ಅಥವಾ ಇತರ ಕಾರಣಗಳಿಂದ ಬಂದರೆ ತಕ್ಷಣ ಮಾಹಿತಿ ನೀಡಬೇಕು. ಮದ್ಯಪಾನ ವಿತರಿಸಲು ಅಬಕಾರಿ ಇಲಾಖೆಯ ಅನುಮತಿ ಕಡ್ಡಾಯ. ಗಾಂಜಾ, ಅಫೀಮು ಸೇರಿದಂತೆ ಯಾವುದೇ ಮಾದಕ ವಸ್ತುಗಳ ಸೇವನೆಗೆ ಅವಕಾಶ ನೀಡಬಾರದು. ನಿಯಮ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.


Spread the love
Subscribe
Notify of

0 Comments
Inline Feedbacks
View all comments